ನಡೆದಾಡುವ ಪರಿಸರ ಮಾತೆ, ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಸೋಮವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಾಲಕ್ಕಿ ಸಮುದಾಯದ ತುಳಸಿಗೌಡ (86) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ವೃಕ್ಷಮಾತೆ, ನಡೆದಾಡುವ ಜ್ಞಾನಕೋಶ ಎಂದೇ ಖ್ಯಾತರಾಗಿದ್ದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾವಿರಗಟ್ಟಲೇ ಗಿಡಗಳಿಗೆ ಜೀವ ನೀಡಿ ಮರವಾಗಿಸಿದ್ದರು. ಇವರ ಪರಿಸರ ಮೇಲಿನ ಪ್ರೀತಿಯನ್ನು ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಮರಗಳ ಜೊತೆಗೆ ನಿತ್ಯ ಬದುಕುತ್ತಿದ್ದ, ಅವುಗಳನ್ನು ಮಕ್ಕಳಂತೆ ಪ್ರೀತಿಸುತ್ತಿದ್ದ ತುಳಸಿ ಗೌಡ. ನೆಟ್ಟು ಬೆಳೆಸಿದ ಗಿಡಗಳಿಗೆ ಲೆಕ್ಕವಿಲ್ಲ. ಇವರನ್ನು ನಡೆದಾಡುವ ಪರಿಸರ ಮಾತೆ ಎಂದು ಪರಿಸರ ಪ್ರಿಯರು ಪ್ರೀತಿಸುತ್ತಿದ್ದರು. ಮುನ್ನೂರಕ್ಕೂ ಹೆಚ್ಚಿನ ಮರಗಳ ಪರಿಚಯ ಇವರಿಗಿತ್ತು.
ಪರಿಸರದ ಕುರಿತು ಅಪಾರ ಜ್ಞಾನವಿತ್ತು. ಪರಿಸರ ಅಧ್ಯಯನ ಮಾಡುವವರಿಗೂ, ಅರಣ್ಯಾಧಿಕಾರಿಗಳಿಗೂ ಇವರು ಜ್ಞಾನದ ಮೂಲವಾಗಿದ್ದರು. ತಮ್ಮ ಪಾಡಿಗೆ ತಾವು ಹಸಿರೀಕರಣ ಮಾಡುತ್ತ ನೆಮ್ಮದಿಯಿಂದ ಬದುಕುತ್ತಿದ್ದ ಇವರು ಈ ಪೀಳಿಗೆಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಮಾದರಿಯಾಗಿ ಎಲ್ಲರೊಳಗೂ ಉಳಿದಿದ್ದಾರೆ.
ವೃಕ್ಷಮಾತೆಯ ನಿಧನದಿಂದ ಕರುನಾಡಿನ ಬೃಹತ್ತಾದ ವೃಕ್ಷವೊಂದನ್ನು ನಾಡು ಕಳೆದುಕೊಂಡಂತಾಗಿದೆ.












