ಹೇರಿಕುದ್ರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಯಕ್ಷ ಹಬ್ಬ ಹೇರಿಕುದ್ರು-2023 ಶ್ರೀ ಕೃಷ್ಣ ಲೀಲಾಮೃತ ಯಕ್ಷಗಾನವನ್ನು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯು ಅಯೋಜಿಸಿದ್ದು, ಪುಟಾಣಿಗಳು ಯಕ್ಷಗಾನ ಪ್ರದರ್ಶನದಲ್ಲಿ ನಿರತರಾಗಿದ್ದಾಗ ಪ್ರದರ್ಶನವನ್ನು ಮಧ್ಯದಲ್ಲಿಯೇ ನಿಲ್ಲಿಸಿದ ಪ್ರಸಂಗ ನಡೆದಿದ್ದು ಇದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಪ್ರಕರಣದ ವಿಡಿಯೋ ವೈರಲ್ ಆಗಿದೆ.
ಆನಗಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಉದಯ ಪೂಜಾರಿ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಪೊಲೀಸರು ಮಕ್ಕಳ ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಈ ಬಗ್ಗೆ ಯಕ್ಷಗಾನ ಆಯೋಜಕರು ಸಾರ್ವಜನಿಕವಾಗಿ ಅಳಲು ತೋಡಿಕೊಂಡಿದ್ದಾರೆ.
ಮಹಾಬಲ ಹೇರಿಕುದ್ರು ಎಂಬವರು ಸುಮಾರು ಐದು ವರ್ಷಗಳಿಂದ ಸ್ಥಳೀಯ ಹವ್ಯಾಸಿ ತಂಡಗಳ ಪ್ರೋತ್ಸಾಹಕ್ಕಾಗಿ ನವೆಂಬರ್ ತಿಂಗಳಲ್ಲಿ ದಿನಕ್ಕೊಂದರಂತೆ ಹತ್ತು ತಂಡಗಳ ಯಕ್ಷಗಾನ ಪ್ರದರ್ಶನ ಆಯೋಜಿಸಿಕೊಂಡು ಬರುತ್ತಿದ್ದಾರೆ. ಅದರ ಭಾಗವಾಗಿ ಶನಿವಾರ 15 ವರ್ಷಗಳ ಒಳಗಿನ ಮಕ್ಕಳಿಂದ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಉದಯ ಪೂಜಾರಿ ಅವರ ದೂರಿನ ಮೇಲೆ ಪೊಲೀಸರು ಪ್ರದರ್ಶನವನ್ನು ನಿಲ್ಲಿಸಲು ಹೇಳಿದ್ದರಿಂದ ಅನಿವಾರ್ಯವಾಗಿ ಯಕ್ಷಗಾನವನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಆಯೋಜಕರು ಪುನಃ ಅನುಮತಿ ಪಡೆದುಕೊಂಡು ಒಂದು ಗಂಟೆಗಳ ಕಾಲ ಹೆಚ್ಚುವರಿ ಪ್ರದರ್ಶನ ನೀಡುವ ಭರವಸೆ ನೀಡಿದ್ದಾರೆ. ಆದಾಗ್ಯೂ, ಅನುಮತಿ ದೊರೆಯದಿದ್ದಲ್ಲಿ ಯಕ್ಷಗಾನ ಆಯೋಜಿಸುವುದೇ ಕಷ್ಟವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ದೂರಿನ ಪ್ರತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮಹಾಬಲ ಪೂಜಾರಿ ಅವರು ಕುಂದಾಪುರ ತಾಲೂಕು ಆನಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹೇರಿಕುದ್ರು ಮಾನಸ ಮಂದಿರ ಎಂಬ ಕಟ್ಟಡವನ್ನು ಅಕ್ರಮವಾಗಿ ನಿರ್ಮಾಣ ಮಾಡಿದ್ದಾರೆ. ಆ ಕಟ್ಟಡಕ್ಕೆ ನೀರಿನ ಸಂಪರ್ಕವನ್ನೂ ಅಕ್ರಮವಾಗಿ ಪಡೆದುಕೊಂಡಿದ್ದು, ಅಲ್ಲಿ ಲಾಭದಾಯಕ ವ್ಯವಹಾರ ನಡೆಸಲಾಗುತ್ತಿದೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.
ನೀರಿನ ಸಂಪರ್ಕವನ್ನು ಈಗಾಗಲೇ ಕಡಿತಗೊಳಿಸಲಾಗಿದ್ದು, ಆ ಕುರಿತ ದಂಡದ ಮೊತ್ತವನ್ನು ಗ್ರಾಮ ಪಂಚಾಯತ್ಗೆ ಇನ್ನೂ ಪಾವತಿಸಿಲ್ಲ. ಕಟ್ಟಡದ ಪರವಾನಗಿ ಸಂಬಂಧ ದಾಖಲೆ ನೀಡಬೇಕು, ದಂಡದ ಹಣ ಪಾವತಿಸಬೇಕು, ಲಾಭದಾಯಕ ವ್ಯವಹಾರ ನಡೆಸಬಾರದು ಮತ್ತು ಆ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮ ನಡೆಸದಂತೆ ಕ್ರಮಕ್ಕೆ ಆಗ್ರಹಿಸಿದ ಉದಯ ಪೂಜಾರಿ ಅವರು ಗ್ರಾಮ ಪಂಚಾಯತ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯ ಗ್ರಾಮ ಪಂಚಾಯತ್ನವರು ಮಹಾಬಲ ಪೂಜಾರಿ ಅವರಿಗೆ ನ. 2ರ ದಿನಾಂಕ ಇರುವ ತಿಳುವಳಿಕೆ ಪತ್ರ ನೀಡಿ, ಮೂರು ದಿನಗಳ ಒಳಗೆ ದಾಖಲೆಗಳನ್ನು ಸಲ್ಲಿಸಿ ಗ್ರಾಮ ಪಂಚಾಯತ್ಗೆ ಸ್ಪಷ್ಟನೆ ನೀಡಬೇಕು ಎಂದು ತಿಳಿಸಲಾಗಿತ್ತು.
ಹೀಗಾಗಿ ಈ ಯಕ್ಷಗಾನ ಪ್ರದರ್ಶನ ತಡೆಗೆ ಈ ಹಿನ್ನೆಲೆಯೂ ಕಾರಣ ಇರಬಹುದಾ ಎಂಬ ಮಾತುಗಳು ಕೇಳಿಬರುತ್ತಿದೆ. ಅದಾಗ್ಯೂ ಮಕ್ಕಳ ಯಕ್ಷಗಾನವನ್ನು ಆ ರೀತಿಯಾಗಿ ನಿಲ್ಲಿಸಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.