ನಮ್ಮ ಸೇನೆ ಸಿದ್ದವಾಗಿದೆ, ಯಾವುದೇ ಕ್ಷಣದಲ್ಲಿ ದಾಳಿ, ಇರಾನ್‌ಗೆ ಟ್ರಂಪ್ ಎಚ್ಚರಿಕೆ:

ವಾಷಿಂಗ್ಟನ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರ ಉತ್ಪಾದನಾ ಸಾಮರ್ಥ್ಯ ಶೇ.85ರಷ್ಟು ಕಡಿಮೆಯಾಗಿದೆ. ಆದರೂ ಅಗತ್ಯಬಿದ್ದರೆ ಇರಾನ್ ವಿರುದ್ಧ ಮತ್ತೆ ಮಿಲಿಟರಿ ಕ್ರಮ ಕೈಗೊಳ್ಳಲು ಅಮೆರಿಕ ಸಿದ್ಧವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವ ಸಾಮರ್ಥ್ಯವನ್ನು ಶೇ.85ರಷ್ಟು ಕಡಿಮೆ ಮಾಡಿಕೊಂಡಿದೆ. ಅಲ್ಲದೆ, ಅಮೆರಿಕದೊಂದಿಗೆ ಸೌಜನ್ಯಯುತವಾಗಿ ಮಾತುಕತೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಸಂಘರ್ಷಕ್ಕೆ ಅಂತ್ಯ ಹಾಡುವ ಸಾಧ್ಯತೆಯಿದೆ. ಆದರೆ, ಅಮೆರಿಕ ಮಿಲಿಟರಿ ಕ್ರಮ ಕೈಗೊಳ್ಳುವ ನಿರ್ಧಾರದಿಂದ ಸಂಪೂರ್ಣವಾಗಿ ಹಿಂದೆ ಸರಿದಿದೆ ಎಂದು ಭಾವಿಸಬಾರದು ಎಂದು ಅವರು ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಯಾವುದೇ ಕ್ಷಣದಲ್ಲೂ ದಾಳಿಗೆ ಸಿದ್ಧ

ಒಂದು ವೇಳೆ ಮತ್ತೆ ಯುದ್ಧದಲ್ಲಿ ಮಧ್ಯಪ್ರವೇಶಿಸುವ ಅನಿವಾರ್ಯತೆ ಎದುರಾದರೆ ಮಿಲಿಟರಿ ಕ್ರಮ ಕೈಗೊಳ್ಳಲು ಅಮೆರಿಕ ಹಿಂದೇಟು ಹಾಕುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಸೇನಾಪಡೆಗಳು ಈಗಾಗಲೇ ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿವೆ. ಅಗತ್ಯಬಿದ್ದರೆ ಯಾವುದೇ ಕ್ಷಣದಲ್ಲೂ ಮಿಲಿಟರಿ ಕಾರ್ಯಾಚರಣೆ ನಡೆಸಲು ಸಿದ್ಧವಾಗಿವೆ ಎಂದು ಅವರು ತಿಳಿಸಿದ್ದಾರೆ.

ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೆಚ್ಚಿಸುವುದರ ಜತೆಗೆ ಮಾತುಕತೆಯ ಮೂಲಕ ಸಂಘರ್ಷವನ್ನು ಅಂತ್ಯಗೊಳಿಸಲು ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಟ್ರಂಪ್ ನೀಡಿರುವ ಈ ಹೇಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಪರಮಾಣು ಕಾರ್ಯಕ್ರಮದ ವಿಚಾರದಲ್ಲಿ ಇರಾನ್‌ನ ಮುಂದಿನ ನಡೆ ಹಾಗೂ ಅಮೆರಿಕದ ಪ್ರತಿಕ್ರಿಯೆ ಜಾಗತಿಕ ರಾಜತಾಂತ್ರಿಕ ವಲಯದ ಗಮನ ಸೆಳೆದಿದೆ.