ಮಂಗಳೂರು: ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ನ ಪ್ರಥಮ ಬಿ.ಕಾಂ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರವನ್ನು ಡಾನ್ ಬಾಸ್ಕೊ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ತ್ರಿಶಾ ಸಮೂಹ ಸಂಸ್ಥೆಗಳ ಸಂಸ್ಥಾಪಕ, ಲೆಕ್ಕ ಪರಿಶೋಧಕ ಗೋಪಾಲಕೃಷ್ಣ ಭಟ್ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಎಂಬುದು ವಿದ್ಯಾರ್ಥಿಯಲ್ಲಿನ ಅಂತಃ ಶಕ್ತಿಯನ್ನು ಹೊರ ತರುವ ಸಾಧನವಾಗಿದೆ. ಪರಿಶ್ರಮದ ಮೂಲಕ ಮಾತ್ರ ಸಾಧನೆ ಎನ್ನುವುದು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತ್ರಿಶಾ ಕಾಲೇಜಿನ ಶೈಕ್ಷಣಿಕ ಆಡಳಿತ ಸಲಹೆಗಾರ ನಾರಾಯಣ್ ಕಾಯರ್ಕಟ್ಟೆ ಮಾತನಾಡಿ, ಸಮಯ ಎಲ್ಲರಿಗೂ ಒಂದೇ ಆದರೆ ಆ ಸಮಯವನ್ನು ನಾವು ಹೇಗೆ ಉಪಯೋಗಿಸುತ್ತೇವೆ ಎಂಬುದು ಬಹಳ ಮುಖ್ಯ. ಬಿಟ್ಟ ಬಾಣ, ಕಳೆದ ಸಮಯ ಎಂದೂ ಮರಳಿ ಬಾರದು ಹಾಗಾಗಿ ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ಗಿರೀಶ್ ಮಾಡ್ಲ, ತ್ರಿಶಾ ಸಂಧ್ಯಾ ಕಾಲೇಜಿನ ಪ್ರಾಚಾರ್ಯ ಪ್ರೊ. ಸುಪ್ರಭ, ತ್ರಿಶಾ ಕ್ಲಾಸಸ್ ನ ಮಂಗಳೂರು ಕೇಂದ್ರದ ಮುಖ್ಯಸ್ಥೆ ಯಶಸ್ವಿನಿ ಯಶ್ಪಾಲ್ ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಪ್ರೊ.ಶೈನಿ ವಿ.ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ. ಮರೀನಾ ಸೀಮಾ ಸಿಕ್ವೇರಾ ನಿರೂಪಿಸಿದರು.