ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಅಂಗದಾನ: 7 ರೋಗಿಗಳಿಗೆ ಜೀವದಾನ

ಮಣಿಪಾಲ: 21 ವರ್ಷದ ಉಲ್ಲಾಸ್ ಆರ್ ಎಂಬವರಿಗೆ ಏ. 22 ರಂದು ಭದ್ರಾವತಿ ತಾಲೂಕಿನ ಚೆನ್ನಗಿರಿಯಲ್ಲಿ ರಸ್ತೆ ಅಪಘಾತವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಏ.23 ರಂದು ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭದ್ರಾವತಿ ತಾಲೂಕಿನ ಕೆಂಚನಹಳ್ಳಿ ಗ್ರಾಮ, ನೀರಗುಂಡಿ ಅಂಚೆಯ ರಾಜಪ್ಪ ಇವರ ಮಗನಾದ ಉಲ್ಲಾಸ್ ಅಪಘಾತದ ಪರಿಣಾಮದಿಂದ ತೀವ್ರವಾಗಿ ಗಾಯಗೊಂಡಿದ್ದು, ವೈದ್ಯರು ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ, ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಮಾನವ ಅಂಗಾಂಗ ಕಸಿ ಕಾಯ್ದೆ 1994 ರ ಅನುಸಾರ ಉಲ್ಲಾಸ್ ಅವರನ್ನು ಎರಡು ಬಾರಿ ಪರಿಶೀಲಿಸಿ, ಪರಿಣಿತ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಅಧಿಕೃತವಾಗಿ ಘೋಷಿಸಿದರು.

ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಉಲ್ಲಾಸ್ ಅವರ ತಂದೆ ರಾಜಪ್ಪ ಮತ್ತು ಅವರ ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ದಾನ ಮಾಡಿದ ಹೃದಯ , ಶ್ವಾಸಕೋಶಗಳು, ಮೂತ್ರಪಿಂಡಗಳು, ಯಕೃತ್ತು, ಮತ್ತು ಎರಡು ಕಾರ್ನಿಯಾಗಳು 7 ಜನರ ಜೀವ ಉಳಿಸಲು ಸಹಾಯವಾಗಿದೆ.

ಜೀವನಸಾರ್ಥಕತೆ ಪ್ರೋಟೋಕಾಲ್ ಮತ್ತು ನಿರ್ಧಾರಗಳ ಪ್ರಕಾರ, ಶ್ವಾಸಕೋಶಗಳನ್ನು ಅಪೊಲೊ ಆಸ್ಪತ್ರೆ ಚೆನ್ನೈ, ಯಕೃತ್ ಅನ್ನು ಅಸ್ಟರ್ ಸಿ ಎಂ ಐ ಆಸ್ಪತ್ರೆ ,ಬೆಂಗಳೂರು, ಒಂದು ಮೂತ್ರಪಿಂಡವನ್ನು ಎ ಜೆ ಆಸ್ಪತ್ರೆ ಮಂಗಳೂರು ಮತ್ತು ಎರಡು ಕಾರ್ನಿಯಾಗಳು ಹಾಗೂ ಒಂದು ಮೂತ್ರಪಿಂಡವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಕಸಿ ಮಾಡಲು ನೀಡಲಾಯಿತು.

ಅಂಗದಾನ ಒಂದು ಪುಣ್ಯದ ಕೆಲಸ. ನಾನ್ನ ಮಗ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದು ದಾನಿಯ ತಂದೆ ರಾಜಪ್ಪ ತಿಳಿಸಿದ್ದಾರೆ.

ಉಲ್ಲಾಸ್ ಆರ್ ಕುಟುಂಬದ ಈ ಉದಾತ್ತ ನಿರ್ಧಾರವು ಜನರ ಬದಲಾಗುತ್ತಿರುವ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ, ಇನ್ನಷ್ಟು ಜನರು ಅನುಕರಿಸುವ ಅಗತ್ಯವಿದೆ ಎಂದು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ಹೇಳಿದ್ದಾರೆ.

ದಾನ ಮಾಡಿದ ಅಂಗಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಮಣಿಪಾಲದಿಂದ ಮಂಗಳೂರಿಗೆ ಗ್ರೀನ್ ಕಾರಿಡಾರ್ ಮೂಲಕ ಕಳುಹಿಸಿಕೊಡಲಾಯಿತು.