ಕೇರಳದಲ್ಲಿ ಆರೆಂಜ್ ಅಲರ್ಟ್: ಹವಾಮಾನ ಇಲಾಖೆ : ಕರ್ನಾಟಕ, ಆಂಧ್ರ ಸೇರಿ ದಕ್ಷಿಣ ರಾಜ್ಯಗಳಲ್ಲಿ 2 ದಿನ ಭಾರಿ ಮಳೆ

ನವದೆಹಲಿ: ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಸೋಮವಾರ ತಿಳಿಸಿದೆ. ಕೇರಳದಲ್ಲಿ ಹೆಚ್ಚಿನ ಮಳೆಯಾಗಲಿದ್ದು, ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಅದರಲ್ಲೂ ಮಲಪ್ಪುರಂ, ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ.ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸಲಿದ್ದು, ದಕ್ಷಿಣ ತಮಿಳುನಾಡು ಮತ್ತಿತರ ಪ್ರದೇಶಗಳಲ್ಲಿ ಅದರ ಚಲನೆ ಇರಲಿದೆ. ಇದರಿಂದ ಸುತ್ತಲಿನ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪೆನಿನ್ಸುಲರ್ ಇಂಡಿಯಾದಲ್ಲಿ ಮಳೆ: ದಕ್ಷಿಣ ಭಾರತವನ್ನು ಪೆನಿನ್ಸುಲರ್ ಇಂಡಿಯಾ ಎಂದು ಕರೆಯುತ್ತಾರೆ. ಇದು ಭಾರತದ ದಖ್ಖನ್​ ಪ್ರಸ್ಥಭೂಮಿಯ ದಕ್ಷಿಣ ಭಾಗವಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳ ಜೊತೆಗೆ ಲಕ್ಷದ್ವೀಪ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳನ್ನೂ ಒಳಗೊಂಡಿದೆ.ಹವಾಮಾನ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ನವೆಂಬರ್ 6 ರಿಂದ 8 ರ ನಡುವೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾದರೆ, ಮುಂದಿನ 5 ದಿನಗಳಲ್ಲಿ ದೇಶದ ಉಳಿದ ರಾಜ್ಯಗಳಲ್ಲಿ ಯಾವುದೇ ಗಮನಾರ್ಹ ಹವಾಮಾನ ಬದಲಾವಣೆ ಕಾಣಿಸುತ್ತಿಲ್ಲ ಎಂದು ತಿಳಿಸಿದೆ.

ಐಎಂಡಿ ಪ್ರಕಾರ, ದಕ್ಷಿಣ ತಮಿಳುನಾಡು ಮತ್ತು ಹತ್ತಿರದ ಪ್ರದೇಶಗಳಲ್ಲಿ ಚಂಡಮಾರುತದ ಪರಿಚಲನೆ ಇದೆ. ಮುಂದಿನ ಮೂರು ದಿನಗಳಲ್ಲಿ ಇದು ಪಶ್ಚಿಮ – ವಾಯುವ್ಯವಾಗಿ ಆಗ್ನೇಯ ಮತ್ತು ಮಧ್ಯ ಪೂರ್ವ ಅರೇಬಿಯನ್ ಸಮುದ್ರದ ಕಡೆಗೆ ಚಲಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.ಕೇರಳದಲ್ಲಿ ಆರೆಂಜ್​ ಅಲರ್ಟ್​: ಕೇರಳದ ಮೂರು ಜಿಲ್ಲೆಗಳಾದ ಮಲಪ್ಪುರಂ, ಇಡುಕ್ಕಿ ಮತ್ತು ಪತ್ತನಂತಿಟ್ಟಿನಲ್ಲಿ ಭಾರಿ ಮಳೆಯಾಗಲಿದೆ. ಹೀಗಾಗಿ ಈ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. 115.6 ರಿಂದ 204.4 ಮಿಮೀ ವರೆಗೆ ಮಳೆಯಾಗಲಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಜನರಿಗೆ ಸೂಚಿಸಲಾಗಿದೆ.

ನವೆಂಬರ್ 4 ರಂದು ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿತ್ತು. ನಿರಂತರ ಮಳೆಯಿಂದಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಅಲ್ಲದೇ ಧಾರಾಕಾರ ಮಳೆಗೆ ಇಬ್ಬರು ಸಾವಿಗೀಡಾಗಿದ್ದರು. 18 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಭಾರೀ ಮಳೆಯಿಂದಾಗಿ ತಮಿಳುನಾಡಿನ ಚೆನ್ನೈ, ನೆಲ್ಲೈ, ಕನ್ಯಾಕುಮಾರ್, ಥೇಣಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಶಾಲಾ – ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಈಶಾನ್ಯ ಮಾನ್ಸೂನ್​ ಆರಂಭವು ದಕ್ಷಿಣ ಭಾರತದಲ್ಲಿ ಭಾರೀ ಮತ್ತು ಅತ್ಯಧಿಕ ಮಳೆ ನೀಡುತ್ತವೆ. ಚಳಿಗಾಲದ ಮಾನ್ಸೂನ್ ಎಂದೂ ಕರೆಯುತ್ತಾರೆ. ಈಶಾನ್ಯ ಮಾನ್ಸೂನ್, ನೈಋತ್ಯ ಮಾನ್ಸೂನ್‌ನ ಪ್ರತಿರೂಪವಾಗಿದೆ. ಸಾಮಾನ್ಯವಾಗಿ ಇದು ಅಕ್ಟೋಬರ್ – ಡಿಸೆಂಬರ್ ನಡುವೆ ಬರುತ್ತದೆ.