ಬಳ್ಳಾರಿ: ಬಳ್ಳಾರಿ ಜಿಲ್ಲೆಯಿಂದ ವಿಭಜಿಸಿ ನೂತನ ವಿಜಯನಗರ ಜಿಲ್ಲೆಗೆ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ಸಿಕ್ಕಿದ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನ.26 ರಂದು ಬಳ್ಳಾರಿ ಜಿಲ್ಲೆ ಬಂದ್ ಗೆ ಕರೆ ನೀಡಿದೆ.
ಸ್ವಾರ್ಥಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ಒಡೆಯಬೇಡಿ. ಆನಂದ ಸಿಂಗ್ ತಮ್ಮ ಸ್ವಾರ್ಥಕ್ಕಾಗಿ, ಹೊಸಪೇಟೆಯಿಂದ ಹಂಪಿವರೆಗಿನ ತಮ್ಮ ಭೂಮಿಗೆ ಉತ್ತಮ ಬೆಲೆ ಬರಲಿ ಅನ್ನೋ ಕಾರಣಕ್ಕೆ ಹೊಸ ಜಿಲ್ಲೆ ರಚನೆಗೆ ಮುಂದಾಗಿದ್ದಾರೆ. ಜಿಲ್ಲೆ ಮಾಡೋದಿದ್ದರೆ ಮೊದಲು ಬೆಳಗಾವಿ, ತೂಮಕೂರು ಜಿಲ್ಲೆಗಳನ್ನ ವಿಭಜಿಸಿ ಎಂದು ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡ ಕುಡಿತಿನಿ ಶ್ರೀನಿವಾಸ್ ಹರಿಹಾಯ್ದರು.
ಶಾಸಕ ಸೋಮಶೇಖರ ರೆಡ್ಡಿ ಹೋರಾಟಕ್ಕೆ ಬೆಂಬಲ ನೀಡುವ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ರೆಡ್ಡಿಯವೇ ಕೇವಲ ಬೆಂಬಲ ಕೊಡೋದಲ್ಲ, ಮುಂದೆ ನಿಂತು ಹೋರಾಡೋಣ ಬನ್ನಿ. ರಾಮುಲು ತಮ್ಮ ಸ್ವಾರ್ಥಕ್ಕಾಗಿ ವಿಜಯನಗರ ಜಿಲ್ಲೆ ರಚನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಆನಂದ ಸಿಂಗ್ ಅವರಿಗೆ ಬಳ್ಳಾರಿಗೆ ಕಾಲಿಡಲು ಬಿಡುವುದಿಲ್ಲ. ಬಳ್ಳಾರಿ ಅಖಂಡವಾಗಿದ್ದರೆ ಮಾತ್ರ ಅವರನ್ನ ಒಳಗೆ ಬಿಟ್ಕೊತ್ತೇವೆ. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಅವರಿಗೆ ಬಳ್ಳಾರಿ ನಗರ ಪ್ರವೇಶ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.