ಪೌರತ್ವ ತಿದ್ದುಪಡಿ ವಿರೋಧಿಸಿ ಪ್ರತಿಭಟನೆಗೆ ಅವಕಾಶ: ಅನಾಹುತಗಳಾದರೆ ಜಿಲ್ಲಾಡಳಿತವೇ ಹೊಣೆ: ಯಶ್ ಪಾಲ್ ಸುವರ್ಣ

ಉಡುಪಿ: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆಸಲು ಕೆಲವು ರಾಷ್ಟ್ರಘಾತುಕ ಶಕ್ತಿಗಳು ಮುಂದಾಗಿದ್ದು, ಪೊಲೀಸ್ ಇಲಾಖೆ ಈ ರೀತಿಯ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರೆ ಮುಂದೆ ಆಗಬಹುದಾದ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಲಿದೆ ಎಂದು ಯುವ ಮುಖಂಡ ಯಶಪಾಲ್ ಸುವರ್ಣ ಅವರು ಎಚ್ಚರಿಸಿದ್ದಾರೆ.
ದೇಶವನ್ನು ಮತೀಯ ಆಧಾರದಲ್ಲಿ ವಿಭಜಿಸಿದ ಬಳಿಕ ಅತೀ ಹೆಚ್ಚು ತಾರತಮ್ಯ ಮತ್ತು ದಬ್ಬಾಳಿಕೆಗೆ ಒಳಗಾದವರು ಪಾಕ್ ಮತ್ತು ಬಾಂಗ್ಲಾ ದೇಶದಲ್ಲಿರುವ ಹಿಂದೂ ಅಲ್ಪ ಸಂಖ್ಯಾತರು. ಅಲ್ಲಿಂದ ಶರಣಾರ್ಥಿಗಳಾಗಿ ಭಾರತಕ್ಕೆ ಬಂದಿರುವ ಹಿಂದೂಗಳಿಗೆ ಈವರೆಗೂ ಪೌರತ್ವ ಸಿಕ್ಕಿಲ್ಲ. ಈ ಹೊಸ ಕಾಯ್ದೆಯಲ್ಲಿ ಈ ದಮನಿತ ಹಿಂದೂಗಳಿಗೆ ಭಾರತದ ಪೌರತ್ವ ನೀಡುವ ಪ್ರಸ್ತಾಪವಿದೆ.  ಬಾಂಗ್ಲಾ ಮತ್ತು ಪಾಕಿಸ್ಥಾನ ಇಸ್ಲಾಮಿಕ್ ರಿಪಬ್ಲಿಕ್ ಎಂದು ಅಧಿಕೃತವಾಗಿ ಘೋಷಣೆಯಾದ ಬಳಿಕ ಅಲ್ಲಿಂದ ಮುಸಲ್ಮಾನರು ಭಾರತದೊಳಗೆ ಬರುವ ಅಗತ್ಯವಾದರೂ ಏನು ? ಅನಧಿಕೃತವಾಗಿ ಭಾರತದೊಳಗೆ ನುಸುಳಿರುವ ಅಕ್ರಮ ನುಸುಳುಕೋರರನ್ನು ಹೊರ ಹಾಕುವ ವಿಚಾರ  ಬಂದಾಗ ಇಲ್ಲಿರುವ ಒಂದು ಸಮುದಾಯ ಯಾಕಾಗಿ ಉರಿದು ಬೀಳುತ್ತಿದೆ. ಭಾರತೀಯರಿಗಿಂತ ಇವರಿಗೆ ಬಾಂಗ್ಲಾ ನುಸುಳುಕೋರರ ಬಗ್ಗೆ ಹೆಚ್ಚು ಪ್ರೀತಿ ಹುಟ್ಟಲು ಕಾರಣವೇನು.? ದೇಶದ ಭದ್ರತೆಯ ದೃಷ್ಟಿಯಿಂದ ಕೇಂದ್ರ ಕೈ ಗೊಂಡಿರುವ ಈ ನಿರ್ಣಯವನ್ನು ವಿರೋಧಿಸುವ ಮೂಲಕ ಕೆಲವು ಮೂಲಭೂತವಾದಿಗಳು ತಮ್ಮ ನೈಜ್ಯ ಮುಖವನ್ನು ಬಹಿರಂಗಗೊಳಿಸುತ್ತಿದ್ದಾರೆ.
ಪಾಕಿಸ್ಥಾನದಲ್ಲಿ ಭಾರತದಿಂದ ಹೋದ ಹಿಂದೂಗಳಿಗೆ ಪೌರತ್ವ ನೀಡುವುದು ದೂರದ ಮಾತು. ದ್ವಿರಾಷ್ಟ್ರವಾದದ ಸಿದ್ದಾಂತವನ್ನು ಒಪ್ಪಿ ದೇಶ ವಿಭಜನೆಯ ಕಾಲದಲ್ಲಿ ಭರತದದಿಂದ ಅಲ್ಲಿಗೆ ಹೋದ ಮುಸಲ್ಮಾನರಿಗೂ ಈವರೆಗೆ ಪೌರತ್ವ ನೀಡಲಾಗಿಲ್ಲ. ಅವರನ್ನು ಮುಹಾಜಿರ್‍ಗಳು ಎಂದು ಕರೆಯಲಾಗುತ್ತಿದೆ.
ದೇಶದ ಜಾತ್ಯಾತೀತ ವ್ಯವಸ್ಥೆ ಭದ್ರವಾಗಿ ಉಳಿಯ ಬೇಕಾದರೆ ಪೌರತ್ವ ಕಾಯ್ದೆಯನ್ನು ವಿರೋಧಿಸುತ್ತಿರುವ ರಾಷ್ಟ್ರಘಾತುಕ ಶಕ್ತಿಗಳನ್ನು ಬಗ್ಗು ಬಡಿಯಲೇ ಬೇಕಾಗಿದೆ. ಕರಾವಳಿಯಲ್ಲೂ ಬಾಂಗ್ಲಾ ನುಸುಳುಕೋರರ ಸಂಖ್ಯೆ ವ್ಯಾಪಕವಾಗಿದ್ದು, ಇಲ್ಲಿನ ಸ್ಥಳಿಯರು ಅವರಿಗೆ ಸರಕಾರಿ ದಾಖಲೆಗಳನ್ನು ಮತ್ತು ಭದ್ರತೆಯನ್ನು ನೀಡಿತ್ತಿದ್ದಾರೆ. ಈ ವ್ಯಕ್ತಿಗಳೇ ಈಗ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪೌರತ್ವಕಾಯ್ದೆಯು ಸಂವಿಧಾನಬದ್ಧವಾಗಿ ಕೆಳಮನೆ ಮತ್ತು ಮೇಲ್ಮನೆಯಲ್ಲಿ ಅಂಗೀಕಾರಗೊಂಡು ಜಾರಿಯಾಗಿದೆ. ಇದನ್ನು ವಿರೋಧಿಸುವುದು ಸಂವಿಧಾನವಿರೋಧಿ ಕ್ರಮವಾಗಿದೆ. ಪೊಲೀಸ್ ಇಲಾಖೆ ಈ ರೀತಿಯ ಸಂವಿಧಾನ ವಿರೋಧಿ ಶಕ್ತಿಗಳಿಗೆ ಪ್ರೋತ್ಸಾಹ ನೀಡಿದರೆ ಇದಕ್ಕೆ ಪ್ರತಿಯಾಗಿ ರಾಷ್ಟ್ರಭಕ್ತ ಸಂಘಟನೆಗಳನ್ನು ಒಗ್ಗೂಡಿಸಿ ಬೃಹತ್ ಕಾಶರ್ಯಕ್ರಮವನ್ನು ನಾವೂ ಹಮ್ಮಿಕೊಳ್ಳಲಿದ್ದೇವೆ. ಮುಂದೆ ಯಾವುದೇ ರೀತಿಯ ಗೊಂದಲಗಳು ಏರ್ಪಟ್ಟರೆ ಅದಕ್ಕೆ ಇಲಾಖೆಯೇ ಹೊಣೆಯಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.