ಉಡುಪಿ: ಸೆಪ್ಟೆಂಬರ್ 28ರಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ಭಕ್ತರಿಗೆ ಕೆಲ ನಿಬಂಧನೆಗಳೊಂದಿಗೆ ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗುವುದು. ಪರ್ಯಾಯ ಅದಮಾರು ಮಠ ವಿಶ್ವಪ್ರಿಯತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದ್ದಾರೆ.
ಇಂದು ಮಠದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಸೆ.21ರ ಬಳಿಕ ಕೇಂದ್ರ ಸರ್ಕಾರವು ಕೋವಿಡ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿರುವುದರಿಂದ ಕೆಲವೊಂದು ಷರತ್ತುಗಳೊಂದಿಗೆ ಶ್ರೀಕೃಷ್ಣಮಠದಲ್ಲಿ ಸೆ. 28ರಿಂದ ಮಧ್ಯಾಹ್ನ 2ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸ್ಥಳೀಯ ಹಾಗೂ ಪರವೂರಿನ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾರ್ಚ್ 22ರಿಂದ ಕೃಷ್ಣಮಠದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ದೇವರ ದರ್ಶನ ಪಡೆಯಲು ಭಕ್ತರು ಪಾಲಿಸಬೇಕಾದ ನಿಬಂಧನೆಗಳು ಈ ಕೆಳಗಿನಂತಿದೆ:
*ಮಧ್ಯಾಹ್ನ 2ರಿಂದ ಸಂಜೆ 5 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ
*ಭಕ್ತರು ರಾಜಾಂಗಣದ ಬಳಿ ಇರುವ ಉತ್ತರ ದ್ವಾರದ ಮೂಲಕ ಮಠಕ್ಕೆ ಬರಬೇಕು.
*ಉತ್ತರದ ದ್ವಾರದಿಂದ ಮಠಕ್ಕೆ ಪ್ರವೇಶಿಸುವ ಭಕ್ತರು, ಭೋಜನ ಶಾಲೆಯ ಮೇಲ್ಗಡೆಯಿಂದ ತೆರಳಿ ಗರುಡ ದೇವರ ಬಳಿ ಕೆಳಗಿಳಿದು ಕೃಷ್ಣನ ದರ್ಶನ ಪಡೆದು, ಮುಖ್ಯಪ್ರಾಣ ದೇವರ ಬಳಿ ಇರುವ ಮೆಟ್ಟಿಲುಗಳ ಮೂಲಕ ಸಾಗಿ ಅಲ್ಲಿಂದಲೇ ನಿರ್ಗಮಿಸಬೇಕು.
*ಮುಂದಿನ ದಿನಗಳಲ್ಲಿ ರಥಬೀದಿಯಿಂದ ಮಧ್ವಸರೋವರದ ಮೇಲಿರುವ ದಾರಿಯಿಂದ ಸೇವಾ ಕಚೇರಿಯಿಂದ ಮುಂದೆ ಸಾಗಿ ಅಲ್ಲಿಂದ ಕೃಷ್ಣಮಠದೊಳಗೆ ಪ್ರವೇಶಿ ದರ್ಶನ ಪಡೆಯಲು ಮಠದಿಂದ ಕಡ್ಡಾಯವಾಗಿ ಪ್ರವೇಶ ಪತ್ರ ಪಡೆಯಬೇಕು. ಇಲ್ಲವೇ ಉತ್ತರ ದ್ವಾರದ ಮೂಲಕ ಸಾಗಿ ದರ್ಶನ ಪಡೆಯಬಹುದು.
*ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಕೌಂಟರಿನಲ್ಲಿ ಪ್ರಸಾದ ಸ್ವೀಕರಿಸಬಹುದು.
*ಭಕ್ತರು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶ್ರೀಕೃಷ್ಣಾ ಸೇವಾ ಬಳಗದ ಯಶ್ ಪಾಲ್ ಸುವರ್ಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಠರಿಗಳಾದ ಶ್ರೀರಮಣ ಆಚಾರ್ಯ, ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಎಂ.ಬಿ. ಪುರಾಣಿಕ್, ಪ್ರಧಾನ ಸಂಚಾಲಕ ವೈ.ಎನ್. ರಾಮಚಂದ್ರ ರಾವ್, ಆಡಿಟರ್ ಗಣೇಶ್ ಹೆಬ್ಬಾರ್, ದಿನೇಶ್ ಪುತ್ರನ್, ಪ್ರದೀಪ್ ರಾವ್, ಸಂತೋಷ್ ಕುಮಾರ್ ಉದ್ಯಾವರ, ಮಾಧವ ಉಪಾಧ್ಯಾಯ, ಶ್ರೀನಿವಾಸ ಪೆಜತ್ತಾಯ ಉಪಸ್ಥಿತರಿದ್ದರು.