ಸಮಾಜ ಸೇವೆಗೆ ಪ್ರಾಮುಖ್ಯತೆ ವಿಶ್ವದೆಲ್ಲೆಡೆ ಇದೆ. ಆ ನಿಟ್ಟಿನಲ್ಲಿ ಭಾರತವು ಹೊರತಾಗಿಲ್ಲ. ಇತಿಹಾಸದ ಪುಟಗಳ ತಿರುವಿದರೆ ದಾನ, ದತ್ತಿ ನಮ್ಮ ಸನಾತನ ಪರಂಪರೆಯಲ್ಲೇ ಹಾಸು ಹೊಕ್ಕಾಗಿದೆ. ಆದರೆ ಸಮಾಜ ಸೇವೆಗೂ -ಸಮಾಜ ಕಾರ್ಯಕ್ಕೂ ವ್ಯತ್ಯಾಸ ಇದೆ. ಸಮಾಜ ಕಾರ್ಯವನ್ನೂ ಸಮಾಜ ಸೇವೆ ಎಂದು ತಪ್ಪಾಗಿ ಭಾವಿಸುವುದು ತೀರಾ ಸಾಮಾನ್ಯ. ಸಮಾಜ ಸೇವೆ -ಸಮಾಜ ಕಾರ್ಯ ಎರಡರಲ್ಲೂ ಹೋಲಿಕೆ ಆಗುವ ಅಂಶ ಸಮಾಜದ ಏಳಿಗೆಯೇ ಆಗಿದ್ದರೂ ರೂಪುರೇಷೆಗಳು ವಿಭಿನ್ನ.
ಸಮಾಜ ಕಾರ್ಯ ಎನ್ನುವಂತದ್ದು ಒಂದು ಪ್ರೊಫೆಷನಲ್ ಕೋರ್ಸ್. ಅಂದರೆ ವ್ಯಕ್ತಿಯೊಬ್ಬ ಸಮಾಜ ಕಾರ್ಯದಲ್ಲಿ ತನ್ನ ಭವಿಷ್ಯವನ್ನೂ ರೂಪಿಸಿಕೊಳ್ಳುತ್ತೇನೆಂದರೆ ಅವರು ಆ ವಿಷಯದಲ್ಲಿ ಶಿಕ್ಷಣವನ್ನು ಪಡೆದಿರಬೇಕು. ಕನಿಷ್ಠ ಪದವಿ, ಗರಿಷ್ಠವೆಂದರೆ ಸ್ನಾತಕೋತ್ತರ ಪದವಿಯನ್ನು. ಇದು ಕೇವಲ ಇತರ ಅಧ್ಯಯನ ವಿಷಯಗಳಂತೆ ನಾಲ್ಕು ಗೋಡೆಗಳ ನಡುವಿನ ಶಿಕ್ಷಣವಲ್ಲ. ಸಮಾಜವನ್ನು ಒಳಗೊಂಡಂತೆ ಪ್ರಾಯೋಗಿಕ ಅನುಭವ ನೀಡುವ ವಿಷಯ, ಇದೊಂದು ಥಿಯರಿ ಮಾತ್ರವಲ್ಲದೇ ಪ್ರಾಕ್ಟಿಕಲ್ ವಿಷಯವೂ ಹೌದು.
ಸಮಾಜ ಕಾರ್ಯ ಅಂದ್ರೆ:
ಸಾಮಾನ್ಯವಾಗಿ ಸಮಾಜ ಸೇವೆಯಲ್ಲಿ ನಾವು ನಮ್ಮ ಕೈಲಾದ ಸಹಾಯವನ್ನೂ ಮಾಡುತ್ತೇವೆ. ಆದರೆ ಸಮಾಜ ಕಾರ್ಯದಲ್ಲಿ ಹಾಗಲ್ಲ. ಇಲ್ಲಿ ನಾವು ಅವಶ್ಯಕತೆ ಇರುವ ವ್ಯಕ್ತಿಗಳಿಗೆ ಸ್ವತಃ ಅವರ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳುವಂತೆ ಅವರಿಗೆ ದಾರಿ ತೋರಿಸಬಹುದು.
ಬೇಕಾದಾಗ ಮಾಹಿತಿ ಹಾಗೂ ಸಲಹೆಯ ಮೂಲಕ ಅವರಿಗೆ ಮಾರ್ಗವನ್ನು ತೋರಿಸಬಹುದು. ಉದಾಹರಣೆಗೆ ಹಸಿದವನಿಗೆ ದಿನವೂ ಊಟ ಹಾಕುವುದು ಸಮಾಜಸೇವೆ, ಆದರೆ ಅವನಿಗೆ ಬದುಕಲು ದಾರಿ ತೋರಿಸಿ ತನ್ನ ಊಟ ತಾನು ಹೇಗೆ ಸಂಪಾದಿಸಬೇಕು ಎನ್ನುವುದನ್ನು ಅರಿಯುವಂತೆ ಮಾಡಿಸುವುದು ಸಮಾಜ ಕಾರ್ಯ.
ಸಮಾಜ ಸೇವೆ ಮತ್ತು ಸಮಾಜ ಕಾರ್ಯ ಎರಡೂ ಸಮಾಜದ ಒಳಿತನ್ನೇ ಬಯಸಿದರೂ ಸಮಾಜಕಾರ್ಯಕ್ಕೆ ಅದರದ್ದೇ ಆದ ವೃತ್ತಿ ಜೀವನ ಇರುವುದರಿಂದ ಇಲ್ಲಿ ಸಮಾಜ ಕಾರ್ಯಕರ್ತನಿಗೆ ಸಂಬಳ ಇರುತ್ತದೆ. ಇನ್ನು ವೈಯಕ್ತಿಕವಾಗಿ ನಿಸ್ವಾರ್ಥ ಸೇವೆಯನ್ನು ಒಬ್ಬ ಸಮಾಜ ಕಾರ್ಯ ಪದವಿ ಪಡೆದವರು ಮಾಡಬಹುದು, ಆದರೂ ಸಮಾಜ ಕಾರ್ಯ ಕೇವಲ ಸೇವೆ ಅಲ್ಲ. ಅದೊಂದು ವೃತ್ತಿ ಕೂಡ ಹೌದು. ಅದಕ್ಕೆ ಅದರದೇ ಆದ ಕೌಶಲ್ಯ, ವರ್ತನೆ, ನಿಯಮಗಳಿವೆ. ಅದಕ್ಕೆ ಬದ್ಧನಾಗಿ ಕೆಲಸ ಮಾಡಬೇಕಾಗುತ್ತದೆ.
ಸಮಾಜ ಕಾರ್ಯವನ್ನು ವಿದ್ಯಾರ್ಥಿ ದೆಸೆಯಲ್ಲೇ ಕಾಲೇಜುಗಳಲ್ಲಿ ಕಲಿಯುವುದರಿಂದ ಮುಂದೆ ವೃತ್ತಿ ಜೀವನದಲ್ಲಿ ಅವು ಭಾಗವಾಗಿ ಸಾಗುತ್ತವೆ.
ಸಮಾಜ ಕಾರ್ಯ ವಿಷಯ ಆಯ್ದುಕೊಳ್ಳಿ:
ಸಮಾಜಕಾರ್ಯ ಎನ್ನುವ ವಿಷಯವನ್ನ ಪದವಿ ಕಾಲೇಜುಗಳಲ್ಲಿ ಅಧ್ಯಯನ ವಿಷಯವಾಗಿ ಆಯ್ಕೆ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು. ವಾರದಲ್ಲಿ 4 ದಿನ ತರಗತಿ ಒಳಗಿನ ಪಾಠ ಪ್ರವಚನವಾದರೆ, ಇನ್ನುಳಿದ 2 ದಿನ ಸಂಪೂರ್ಣ ಪ್ರಾಯೋಗಿಕ ಅಧ್ಯಯನ (ಫೀಲ್ಡ್ ಸ್ಟಡಿ ) ಇಲ್ಲಿರಲಿದೆ.
ಜೊತೆಗೆ ಕ್ಯಾಂಪ್, ಸ್ಟಡಿ ಟೂರ್ಸ್, ವಿವಿಧ ಸಂಘ ಸಂಸ್ಥೆಗಳ ಭೇಟಿ, ಬೀದಿ ನಾಟಕ, ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು, ಹೀಗೆ ಹತ್ತು ಹಲವು ವಿಶೇಷ ಅನುಭವಗಳನ್ನು ಕೊಡುವ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ, ಸಂವಹನ ಕಲೆ, ಸಾಮಾಜಿಕ ಮೌಲ್ಯಗಳ ಜೊತೆ ಜೊತೆಗೆ ಸಾಮಾಜಿಕವಾಗಿ ವ್ಯವಹಾರ ಮಾಡಲು ಬೇಕಾದ ಎಲ್ಲ ಕೌಶಲ್ಯವನ್ನು ನೀಡುವ ಒಂದೊಳ್ಳೆ ಅಧ್ಯಯನ ವಿಭಾಗ ಈ ಸಮಾಜ ಕಾರ್ಯ.
ಉದ್ಯೋಗ ಎಲ್ಲಿ ಸಿಗುತ್ತೆ?
ಇನ್ನುಳಿದಂತೆ ಸಮಾಜಕಾರ್ಯ ಅಧ್ಯಯನ ಮಾಡಿದವರಿಗೆ ವೃತ್ತಿ ಜೀವನ ಕಟ್ಟಿ ಕೊಳ್ಳಲು ಸಾಕಷ್ಟು ಅವಕಾಶಗಳಿದ್ದು ಸ್ನಾತಕೋತ್ತರ ಹಂತದಲ್ಲೆ ಮೂರು ವಿಶೇಷ ವಿಭಾಗಗಳ ಆಯ್ಕೆಗೆ ಮುಕ್ತ ಅವಕಾಶವಿದೆ ಅವುಗಳೆಂದರೆ ಕಮ್ಯೂನಿಟಿ ಡೆವಲಪ್ಮೆಂಟ್, ಹ್ಯೂಮನ್ ರೆಸಾರ್ಸ್ಸ್ ಮ್ಯಾನೇಜ್ಮೆಂಟ್, ಮೆಡಿಕಲ್ ಅಂಡ್ ಸೈಕಾಟ್ರಿಕ್ ಸೋಶಿಯಲ್ ವರ್ಕ್
ಉತ್ತಮ ಸಮಾಜ ಕಟ್ಟುವುದರ ಜೊತೆಗೆ ಉತ್ತಮ ಭವಿಷ್ಯವನ್ನೂ ರೂಪಿಸುವ ಒಂದೊಳ್ಳೆ ಅಧ್ಯಯನ ವಿಷಯ ಸಮಾಜಕಾರ್ಯ. ಹೊಸತನವನ್ನು ನೀಡುತ್ತಾ ಒಳ್ಳೆಯ ಅನುಭವ ನೀಡುವ ಸಮಾಜ ಕಾರ್ಯ ವಿಭಾಗ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ತನ್ನ ದಿನವನ್ನು ಆಚರಿಸುತ್ತದೆ.
ಪ್ರಸ್ತುತ ಕೊರನ ಅಟ್ಟಹಾಸ ಶಿಕ್ಷಣ ಕ್ಷೇತ್ರದ ಮೇಲೆ ಪರಿಣಾಮ ಬೀರಿ ಕಲಿಕಾ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾದರೂ, ಕಲಿಕೆಗೆ ಮುಕ್ತ ಅವಕಾಶವಿದೆ.ಇದೀಗ ಪದವಿ ತರಗತಿಗಳಿಗೆ ದಾಖಲಾತಿ ಆರಂಭವಾಗಿದ್ದು ಸಮಾಜ ಕಾರ್ಯ ವಿಷಯದಲ್ಲಿ ಪದವಿ ಮಾಡಲು ಆಸಕ್ತರು (ಸರಕಾರಿ ಪದವಿ ಕಾಲೇಜು ಬಾರ್ಕುರು, ಉಡುಪಿ ಜಿಲ್ಲೆ ) ಸಂಪರ್ಕಿಸಬಹುದು.
ಮಂಜುಳಾ. ಜಿ. ತೆಕ್ಕಟ್ಟೆ
ಅತಿಥಿ ಉಪನ್ಯಾಸಕರು
ಸಮಾಜ ಕಾರ್ಯ ವಿಭಾಗ
ಶ್ರೀಮತಿ ರುಕ್ಮಿಣಿ ಶೇಡ್ತಿ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು-ಬಾರಕೂರು.
ಮೊಬೈಲ್ : 9108240575