ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಪಾಕ್ ಮೂಲದ ಮೂವರು ಭಯೋತ್ಪಾದಕರನ್ನು ಶ್ರೀನಗರ ಬಳಿಯ ಡಚಿಗಾಮ್ ಪಾರ್ಕ್ ಬಳಿಯ ಲಿಡ್ವಾಸ್ ಅರಣ್ಯ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.
ಆಪರೇಷನ್ ಮಹಾದೇವ್:
ಹರ್ವಾನ್ ಮುಲ್ನರ್ ಪ್ರದೇಶದಲ್ಲಿ ಉಗ್ರರು ತಂಗಿರುವ ಖಚಿತ ಮಾಹಿತಿ ಆಧರಿಸಿ ಸೋಮವಾರ (ಜು.28) ಬೆಳಗ್ಗೆ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಶಾ ಸೇರಿದಂತೆ 3 ಭಯೋತ್ಪಾದಕರು ಹತರಾಗಿದ್ದಾರೆ ವರದಿಗಳು ಉಲ್ಲೇಖಿಸಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ ಹತ್ಯೆಗೀಡಾಗಿರುವ ಮೂವರು ಪಾಕಿಸ್ತಾನ್ ಮೂಲದವರು ಎಂದು ಗುರುತಿಸಲಾಗಿದೆ. ಮೃತರನ್ನ ಪಹಲ್ಗಾಮ್ ದಾಳಿ ಮಾಸ್ಟರ್ ಮೈಂಡ್ ಸುಲೇಮಾನ್ ಶಾ, ಅಬು ಹಮ್ಜಾ ಹಾಗೂ ಯಾಸಿರ್ ಎಂದು ಶಂಕಿಸಲಾಗಿದೆ. ಸುಲೇಮಾನ್ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಅವನನ್ನು ಹಾಶಿಮ್ ಮೂಸಾ ಎಂದೂ ಕರೆಯಲಾಗುತ್ತಿತ್ತು. ಪಹಲ್ಗಾಮ್‌ನ ದಾಳಿಯ ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಸುಲೇಮಾನ್ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂ. ಬಹುಮಾನವನ್ನು ಘೋಷಿಸಿದ್ದರು. ಕಾರ್ಯಾಚರಣೆ ಬಗ್ಗೆ ಭಾರತೀಯ ಸೇನೆ ಚಿನಾರ್ ಕಾರ್ಪ್ಸ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಲಿಡ್ವಾಸ್ ಅರಣ್ಯ ಪ್ರದೇಶದಲ್ಲಿ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಆರಂಭವಾಗಿದೆ. ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿರುವುದನ್ನು ಖಚಿತ ಪಡಿಸಿತ್ತು. ಈಗ ಆ ಮೂವರು ಉಗ್ರರು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದವರು ಎನ್ನಲಾಗಿದೆ. ಇನ್ನೂ ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆ ಹೇಳಿದೆ. ಘಟನಾ ಸ್ಥಳಕ್ಕೆ ಹೆಚ್ಚುವರಿಯಾಗಿ ಭದ್ರತಾ ಪಡೆಗಳನ್ನು ರವಾನಿಸಲಾಗಿದೆ.
ರೈಫಲ್, ಗ್ರೆನೇಡ್, ಶಸ್ತ್ರಾಸ್ತ್ರಗಳು ವಶ:
ಉಗ್ರರು ಹತ್ಯೆಯಾದ ಸ್ಥಳದಲ್ಲಿ ಹಲವಾರು ಬಂದೂಕುಗಳು, ಎಕಾರ್ಬೈನ್ ಮತ್ತು ಎಕೆ -47 ರೈಫಲ್‌ಗಳು, 17 ರೈಫಲ್ ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ದೊಡ್ಡ ಕಾರ್ಯಾಚರಣೆಯನ್ನು ಯೋಜಿಸುತ್ತಿದ್ದಾರೆ ಎಂದು ಭದ್ರತಾ ಪಡೆಗಳು ಶಂಕಿಸಿವೆ.












