ಉಡುಪಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 73.39 ಲಕ್ಷ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ, ನಾಲ್ವರ ಬಂಧನ

ಉಡುಪಿ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಡ್ರಗ್ಸ್ ಚಟುವಟಿಕೆಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಪ್ರಮುಖ ಮೂರು ಪ್ರಕರಣಗಳಲ್ಲಿ ಬರೋಬ್ಬರಿ 73,39,500 ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ ತಿಳಿಸಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪ್ರಸ್ತಕ ವರ್ಷದಲ್ಲಿ ಗಾಂಜಾ ಸೇವನೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದಂತೆ 209 ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಐದು ವರ್ಷಗಳಲ್ಲಿ ದಾಖಲಿಸಿದ ಅತೀ ಹೆಚ್ಚು ಪ್ರಕರಣಗಳಾಗಿವೆ. ಅಲ್ಲದೆ ಗಾಂಜಾ ಹೊರತುಪಡಿಸಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ವಶಪಡಿಸಿಕೊಂಡ ಮಾದಕವಸ್ತು:
30,57,000 ರೂ. ಮೌಲ್ಯದ ನಿಷೇಧಿತ ಎಂಡಿಎಂಎ 1019 ಮಾತ್ರೆಗಳು, 30 ಲಕ್ಷ ರೂ. ಮೌಲ್ಯದ ಒಂದು ಸಾವಿರ ಎಲ್.ಎಸ್.ಡಿ. ಸ್ಟ್ಯಾಂಪ್ಸ್, 3 ಲಕ್ಷ ರೂ. ಮೊತ್ತದ 30 ಗ್ರಾಂ ತೂಕದ ಬ್ರೌನ್ ಶುಗರ್ ಹಾಗೂ 9,82,500 ರೂ. ಮೌಲ್ಯದ 131 ಗ್ರಾಂ ತೂಕದ ಹೈಬ್ರಿಡ್ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಮೌಲ್ಯ ಅಂದಾಜು 73,39,500 ಆಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಮಾದಕ ವಸ್ತುಗಳ ಸಾಗಾಟ ಹಾಗೂ ಸೇವನೆ ತಡೆಗೆ ವಿಶೇಷ ಕಾರ್ಯಾಚರಣೆಗಾಗಿ ಎಎಸ್ಪಿ ಕುಮಾರಚಂದ್ರ ಅವರ ಉಸ್ತುವಾರಿಯಲ್ಲಿ ತಾಂತ್ರಿಕ ತಂಡ, ತನಿಖಾ ತಂಡ ಹಾಗೂ ಕಾರ್ಯಾಚರಣೆ ತಂಡ ಎಂಬ ಮೂರು ತಂಡಗಳನ್ನು ರಚಿಸಲಾಗಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಕುಮಾರ ಚಂದ್ರ, ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಶ್ ಅಧೀಕ್ಷಕ ಹರಿರಾಂ ಶಂಕರ್, ಕಾರ್ಕಳ ಉಪವಿಭಾಗದ ಪೊಲೀಸ್ ಅಧೀಕ್ಷಕ ಭರತ್ ಎಸ್. ರೆಡ್ಡಿ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ ಮೊದಲಾದವರು ಇದ್ದರು.