ಉಡುಪಿ: ಯಕ್ಷಗಾನ ನೃತ್ಯ ಕಲಿಕೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ. ಬದುಕಿನಲ್ಲಿ ಶಿಸ್ತು ಕಲಿಸುತ್ತದೆ ಎಂದು ಅಂಬಲಪಾಡಿ ಲಕ್ಷ್ಮೀ ಜನಾರ್ದನ ದೇವಳದ ಧರ್ಮದರ್ಶಿ ಡಾ. ನಿ.ಬೀ. ವಿಜಯ ಬಲ್ಲಾಳ್ ಅಭಿಪ್ರಾಯಪಟ್ಟರು.
ಅವರು ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ನೂತನ ಕಟ್ಟಡ ‘ಶ್ರೀ ಜನಾರ್ದನ ಮಂಟಪ’ದಲ್ಲಿ ಜ್ಯೋತಿ ಬೆಳಗಿಸಿ ಯಕ್ಷಗಾನ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದರು.
ನೂತನ ಕಟ್ಟಡಕ್ಕೆ ಅಗತ್ಯವಿರುವ ಮೂಲ ಸೌಕರ್ಯ ಮತ್ತು ಪೀಠೋಪಕರಣಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಇಂದಿರಾ ಶಿವರಾಯ ಪೂಲಿಟೆಕ್ನ್ನಿಕಲ್ ಕಾಲೇಜಿನ ನಿರ್ದೇಶಕ ಡಾ. ಮೋಹನ್ದಾಸ್ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಯಕ್ಷಗಾನ ಗುರು ನರಸಿಂಹ ತುಂಗ, ಸಂಸ್ಥೆಯ ಉಪಾಧ್ಯಕ್ಷ ಕೆ. ಅಜಿತ್ ಕುಮಾರ್ ಸದಸ್ಯರುಗಳಾದ ಪ್ರೂ. ನಾರಾಯಣ ಎಂ. ಹೆಗಡೆ, ಜಯ ಕೆ., ಪ್ರವೀಣ ಉಪಾಧ್ಯ, ಪ್ರಕಾಶ್ ಹೆಬ್ಬಾರ್, ಸುನಿಲ್ ಕುಮಾರ್, ರಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಉಚಿತ ತರಗತಿ: ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಪ್ರತಿ ಭಾನುವಾರ ತರಗತಿ ನಡೆಸಲಾಗುತ್ತದೆ.
ಈ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ನು ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಸ್ಥೆಯ ಸದಸ್ಯ ಮಂಜುನಾಥ ತೆಂಕಿಲಾಯ ವಂದಿಸಿದರು. ಕೋಶಾಧಿಕಾರಿ ನಟರಾಜ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.