ಉಡುಪಿ: ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಉಡುಪಿ ಇದರ ನವೀಕೃತ ಉಚ್ಚಿಲ ಶಾಖೆ ಹಾಗೂ ನೂತನ ಎಟಿಎಂ ಶನಿವಾರ ಉದ್ಘಾಟನೆಗೊಂಡಿತು. ಭಾರತೀಯ ರಿಸರ್ವ್ ಬ್ಯಾಂಕಿನ ನಿದೇರ್ಶಕ ಸತೀಶ್ ಕಾಶೀನಾಥ ಮರಾಠೆ ನವೀಕೃತ ಶಾಖೆಯನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಕನಸು ನನಸುಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಅದರ ಮೊದಲ ಭಾಗವಾಗಿ ಮೀನುಗಾರಿಕಾ ದೋಣಿಗಳಿಗೆ ವಿದೇಶಿ ಎಂಜಿನ್ ಗಳ ಬದಲಾಗಿ ಭಾರತ ನಿರ್ಮಿತ ಎಂಜಿನ್ ಗಳನ್ನು ಅಳವಡಿಸುವ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ದೇಶದ 8 ಉನ್ನತ ಕಂಪೆನಿಗಳೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು.
ಗ್ರಾಹಕರ ವಿಶ್ವಾಸ ಗಳಿಸಿಕೊಂಡು ಅವರಿಗೆ ಉತ್ತಮ ಸೇವೆಯನ್ನು ನೀಡಿದಲ್ಲಿ ಯಶಸ್ಸು ಸಾಧ್ಯ. ಆ ನಿಟ್ಟಿನಲ್ಲಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಇತರ ಬ್ಯಾಂಕ್ ಗಳಿಗೆ ಮಾದರಿಯಾಗಿದೆ. ಸರಳ ರೀತಿಯಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ಜನರ ವಿಶ್ವಾಸಗಳಿಸಿದೆ. ಇದೇ ರೀತಿಯಲ್ಲಿ ಸಾರ್ವಜನಿಕರ ರಂಗದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭಹಾರೈಸಿದರು.
ನಾಡೋಜ ಜಿ. ಶಂಕರ್ ಮಾತನಾಡಿ, ಕೋ-ಆಪರೇಟಿವ್ ಬ್ಯಾಂಕ್ ಗಳು ಬಡ ಮೀನುಗಾರರು ಹಾಗೂ ಶ್ರಮಿಕ ವರ್ಗದವರಿಗೆ ಉತ್ತಮ ಸೇವೆಯನ್ನು ನೀಡುತ್ತಿವೆ. ಯುವಕರಿಗೆ ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕವಾಗಿ ಸಹಕಾರಿಯಾಗಿವೆ. ಇದೀಗ ಆರ್ ಬಿಐನ ಸೂಚನೆಯಂತೆ ಬ್ಯಾಂಕ್ ಸದಸ್ಯರಿಗೆ ಸಿಗುತ್ತಿದ್ದ ಡಿವಿಡೆಂಟ್ ಸ್ಥಗಿತಗೊಂಡಿದ್ದು, ಅದನ್ನು ಬಿಡುಗಡೆ ಮಾಡುವಂತೆ ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಅಗ್ರಹಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಕೊರೊನಾ ಕಾರಣದಿಂದ ಕೋ ಅಪರೇಟಿವ್ ಬ್ಯಾಂಕ್ ಗಳ ಸದಸ್ಯರಿಗೆ ನೀಡಲಾಗುವ ಡಿವಿಡೆಂಟ್ ತಡೆ ಹಿಡಿಯಲಾಗಿದೆ. ಅದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಿಲ್ಲ. ಮುಂದಿನ ವರ್ಷದಲ್ಲಿ ಎರಡು ವರ್ಷದ ಡಿವಿಡೆಂಟ್ ನ್ನು ಒಟ್ಟಿಗೆ ನೀಡಲಾಗುತ್ತದೆ. ಗ್ರಾಹಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ ಎನ್ ರಾಜೇಂದ್ರ ಕುಮಾರ್ ಅವರು ಮಾತನಾಡಿ, ಕೋ ಅಪರೇಟಿವ್ ಸೊಸೈಟಿ ಹಾಗೂ ಬ್ಯಾಂಕುಗಳಿಗೆ ಕೇಂದ್ರ ಸರಕಾರ ಆದಾಯ ತೆರಿಗೆಯನ್ನು ವಿಧಿಸಿದ್ದು, ಇದರಿಂದ ಸಮಸ್ಯೆಯಾಗುತ್ತಿದ್ದು ಕೂಡಲೇ ಇದನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಸಮಾರಂಭದಲ್ಲಿ ಕಾಪು ಪುರಸಭೆಯ ನೂತನ ಅಧ್ಯಕ್ಷ ಅನಿಲ್ ಕುಮಾರ್, ಕಾಪು ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಹಿರಿಯ ಅರ್ಚಕ ವೆಂಕಟ ನರಸಿಂಹ ಉಪಾಧ್ಯಾಯ, ರಾಜ್ಯ ಮೀನುಗಾರಿಕೆ ಇಲಾಖೆಯಿಂದ ನೀಡಲ್ಪಡುವ ಶ್ರೇಷ್ಠ ಮೀನುಗಾರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಹಿರಿಯ ಮೀನುಗಾರ ರಾಮ ಕಾಂಚನ್, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರಣಾಮ್ ಕೆ ಸಾಲ್ಯಾನ್ ಮತ್ತು ಶ್ರೇಯಾ ಬಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮೀನುಗಾರ ಮಹಿಳಾ ಸ್ವ ಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಣೆ, ಬೀದಿ ಬದಿ ವ್ಯಾಪಾರಸ್ಥರಿಗೆ ಕೇಂದ್ರ ಸರಕಾರದ ಬಡವರ ಬಂಧು ಯೋಜನೆಯಡಿ ಬಡ್ಡಿರಹಿತ ಸಾಲ ಯೋಜನೆ ಠೇವಣಿಗಳ ಮೇಲೆ 0.50% ಹೆಚ್ಚುವರಿ ಬಡ್ಡಿ ಹಾಗೂ ಹೊಸ ಗ್ರಾಹಕರಿಗೆ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಮತ್ತು ಉಚಿತ ಎಟಿಎಮ್ ಕಾರ್ಡ್ ನೀಡುವ ಯೋಜನೆಗಳಿಗೆ ಚಾಲನೆ ನೀಡಲಾಯಿತು.
ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡುವ ನಿಟ್ಟಿನಲ್ಲಿ ಬ್ಯಾಂಕಿನಲ್ಲಿ ತುಳು ಲಿಪಿಯಲ್ಲಿ ಅಳವಡಿಸಲಾದ ನಾಮ ಫಲಕವನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ರವರು ಅನಾವಣಗೊಳಿಸಿದರು.
ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಭಾಗವಹಿಸಿದ್ದರು.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿಗಳಾದ ಸುರೇಶ್ ನಾಯಕ್ ಕುಯಿಲಾಡಿ, ಆನಂದ ಪಿ. ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಎಚ್ ಡಿ ಎಫ್ ಸಿ ಬ್ಯಾಂಕಿನ ಕ್ಲಸ್ಟರ್ ಹೆಡ್ ಚಿದಾನಂದ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರೆ, ಶಿಲ್ಪಾ ಜಿ. ಸುವರ್ಣ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ರವರು ಉಪಸ್ಥಿತರಿದ್ದರು.
ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಂಗಳೂರಿನಲ್ಲಿ ಶಾಖೆಗಳನ್ನು ಆರಂಭಿಸುವ ಮೂಲಕ ವ್ಯವಹಾರ ವಿಸ್ತರಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಗ್ರಾಹಕರಿಗೆ ಇನ್ನಿತರ ಆಧುನಿಕ ತಂತ್ರಜ್ಞಾನದ ಸೇವೆಯನ್ನು ಒದಗಿಸಲಾಗುವುದು ಎಂದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಜಿ.ಕೆ. ಶೀನಾ ವಂದಿಸಿದರು. ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.