ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ಇಂದು ನಡೆಯಿತು.
ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಪುಷ್ಪಾ ಜಿ. ಕಿಣಿ ಮಕ್ಕಳ ಮೂತ್ರಪಿಂಡ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಮತ್ತು ಘಟಕ ಮುಖ್ಯಸ್ಥೆ ಡಾ. ಪುಷ್ಪಾ ಜಿ. ಕಿಣಿ ಮಾತನಾಡಿ, ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಈ ಎಂಟು ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅದೇನೆಂದರೆ ಧನಾತ್ಮಕ ಚಿಂತನೆ, ನಿಯಮಿತವಾಗಿ ವೈದ್ಯರನ್ನು ಭೇಟಿ ಮತ್ತು ಕಿಡ್ನಿ ಕಾರ್ಯವನ್ನು ಪರೀಕ್ಷಿಸುವುದು, ಧೂಮಪಾನದಿಂದ ದೂರ ಇರುವುದು, ಪೌಷ್ಠಿಕಾಂಶವುಳ್ಳ ಪಥ್ಯಾಹಾರ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಅವಶ್ಯವಿದ್ದಷ್ಟು ನೀರು ಕುಡಿಯುವುದು ಹಾಗೂ ವೈದ್ಯರ ಸಲಹೆ ಪಡೆಯದೇ ಮಾತ್ರೆ ತೆಗೆದುಕೊಳ್ಳಬಾರದು ಎಂದರು.
ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿ ಡೀನ್ ಡಾ.ಶರತ್ ಕೆ ರಾವ್ ಅವರು, ನಮ್ಮ ಜೀವನ ಶೈಲಿಯನ್ನು ನೋಡಿದರೆ ಎರಡು ಮುಖ್ಯ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ. ಈ ಕಾಯಿಲೆಗಳು ಕಿಡ್ನಿ ಮೇಲೆ ಪರಿಣಾಮ ಬೀರುತ್ತಿವೆ. ಆದರೆ ಇದರ ಬಗ್ಗೆ ಜಾಗೃತಿ ವಹಿಸಿದರೆ ಸುಮಾರು ಶೇ. 50 ರಷ್ಟು ಕಿಡ್ನಿ ಕಾಯಿಲೆಯನ್ನು ಕಡಿಮೆ ಮಾಡಬಹುದು ಎಂದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ, ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಂಕರ್ ಪ್ರಸಾದ್ ಎನ್, ಮಕ್ಕಳ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಲೆಸ್ಲಿ ಲೀವಿಸ್ ಉಪಸ್ಥಿತರಿದ್ದರು.