ಲಾಕ್ ಡೌನ್ ಮಾತ್ರ ತೆರವುಗೊಂಡಿದೆ, ಕೊರೊನಾ ಇನ್ನೂ ಹೋಗಿಲ್ಲ: ಜನತೆಗೆ ಜಾಗೃತೆಯ ಪಾಠ ಹೇಳಿದ ಪ್ರಧಾನಿ ಮೋದಿ

ಬೆಂಗಳೂರು: ದೇಶದಲ್ಲಿ ಲಾಕ್‌ಡೌನ್‌ ಅನ್ನು ತೆರವುಗೊಳಿಸಲಾಗಿದೆ. ಆದರೆ, ಕೊರೊನಾ ಇಲ್ಲಿಂದ ಹೊರಗೆ ಹೋಗಿಲ್ಲ. ಹಾಗಾಗಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಈ ಸಮಯದಲ್ಲಿ ದೇಶದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದರು.

ಅವರು ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದರು. ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಹೋರಾಟ ನಡೆಯುತ್ತಿದ್ದು, ನಮ್ಮ ಜವಾಬ್ದಾರಿ ನಿರ್ವಹಿಸಲು ಮತ್ತು ಜೀವನಕ್ಕೆ ಹೊಸ ಗತಿ ಕೊಡಲು ಪ್ರತಿದಿನ ಮನೆಯಿಂದ ಹೊರಗೆ ಬರಬೇಕಿದೆ. ನಾವು ಮನೆಯಿಂದ ಹೊರಗೆ ಬರುತ್ತಲೇ ಇದ್ದೇವೆ. ಆದರೆ ಯಾರು ಕೊರೊನಾದಿಂದ ಮೈಮರೆಯಬಾರದು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.

ದೇಶದಲ್ಲಿ ಸೋಂಕಿನಿಂದ ಗುಣಮುಖ ಆಗುತ್ತಿರುವವರ ಪ್ರಮಾಣ ಸುಧಾರಿಸುತ್ತಿದೆ ಹಾಗೂ ಸಾವಿನ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ. ವಿಶ್ವದ ಹಲವು ಸುಧಾರಿತ ದೇಶಗಳಿಗೆ ಹೋಲಿಸಿದರೆ ಭಾರತವು ಹೆಚ್ಚಿನ ಸಂಖ್ಯೆಯಲ್ಲಿ ಜನರ ಜೀವನ ಕಾಪಾಡಲು ಯಶಸ್ವಿಯಾಗಿದೆ ಎಂದರು.

ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ದೇಶ ಕಾರ್ಯಪ್ರವೃತ್ತವಾಗಿದೆ. ಆದಷ್ಟು ಬೇಗ ದೇಶದ ಪ್ರತಿಯೊಬ್ಬರಿಗೂ ಕೊರೊನಾ ಲಸಿಕೆ ತಲುಪಿಸುವ ಕೆಲಸ ಆಗಲಿದೆ. ಕೊರೊನಾ ಲಸಿಕೆ ಬರುವವರಿಗೂ ಯಾರೂ ಕೊರೊನಾದಿಂದ ಮೈಮರೆಯಬಾರದು ಎಂದು ಹೇಳಿದರು.