2025 ಮುಗಿಯುತ್ತ ಬಂದಿದೆ. ಈ ವರ್ಷದಲ್ಲಿ ತಿಂಡಿ ತಿನಿಸುಗಳಿಗೆ ಬೇಡಿಕೆ ಹೆಚ್ಚಿದೆ. ಈ ವರ್ಷದ ಮನೆಗೆ ಡೆಲಿವರಿ ಮಾಡಿಕೊಂಡು ತರಿಸಿದ ತಿಂಡಿಗಳ ಪೈಕಿ ಬಿರಿಯಾನಿಯೇ ಫಸ್ಟ್ ಪ್ಲೇಸ್ ಪಡೆದುಕೊಂಡಿದೆ. ಹೌದು. ದೇಶದ ಪ್ರಮುಖ ಆಹಾರ ಡೆಲಿವರಿ ಸಂಸ್ಥೆ ಸ್ವಿಗ್ಗಿ ದಶಕದಿಂದಲೂ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ್ದು, 2025 ರಲ್ಲಿ 93 ಮಿಲಿಯನ್ ಯೂನಿಟ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇದರೊಂದಿಗೆ ಸತತ 10ನೇ ವರ್ಷವೂ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯವಾಗಿ ಬಿರಿಯಾನಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸ್ವಿಗ್ಗಿಯಲ್ಲಿ ನಿಮಿಷಕ್ಕೆ 194 ಅಥವಾ ಪ್ರತಿ ಸೆಕೆಂಡಿಗೆ 3.25 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ.
ಬಿರಿಯಾನಿ ಬಳಿಕ ಬರ್ಗರ್ ಕಿಂಗ್:
“ಹೌ ಇಂಡಿಯಾ ಸ್ವಿಗ್ಗಿ’ಡ”ನ 10ನೇ ಆವೃತ್ತಿಯ ಪ್ರಕಾರ, 57.7 ಮಿಲಿಯನ್ ಚಿಕನ್ ಬಿರಿಯಾನಿ ಆರ್ಡರ್‌ಗಳೊಂದಿಗೆ ಮುಂಚೂಣಿಯಲ್ಲಿದ್ದು, ನಂತರ ಬರ್ಗರ್ 44.2 ಮಿಲಿಯನ್ ಆರ್ಡರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಿಜ್ಜಾ 40.1 ಮಿಲಿಯನ್ ಮತ್ತು ವೆಜ್ ದೋಸೆ 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ನಂತರದ ಸ್ಥಾನದಲ್ಲಿವೆ.
ಸಿಹಿತಿಂಡಿಗಳ ಕಾರುಬಾರು:
ಸಿಹಿತಿಂಡಿಗಳಲ್ಲಿ ಬಿಳಿ ಚಾಕೊಲೇಟ್ ಕೇಕ್ 6.9 ಮಿಲಿಯನ್ ಆರ್ಡರ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಚಾಕೊಲೇಟ್ ಕೇಕ್ (5.4 ಮಿಲಿಯನ್) ಮತ್ತು ಗುಲಾಬ್ ಜಾಮೂನ್ (4.5 ಮಿಲಿಯನ್) ಗಿಂತ ಮುಂದಿದೆ. ಕಾಜು ಬರ್ಫಿ(2 ಮಿಲಿಯನ್) ಮತ್ತು ಬೇಸನ್ ಲಾಡೂ (1.9 ಮಿಲಿಯನ್) ಸೇಲ್ ಆಗಿದೆ.
ಅತೀ ಹೆಚ್ಚು ಆರ್ಡರ್:
ಮುಂಬೈನ ಆಹಾರಪ್ರಿಯರೊಬ್ಬರು 2025 ರಲ್ಲಿ ಸ್ವಿಗ್ಗಿಯಲ್ಲಿ 3,196 ಆಹಾರ ಆರ್ಡರ್‌ಗಳನ್ನು ಮಾಡಿದ್ದಾರೆ. ಇದು ದಿನಕ್ಕೆ ಸುಮಾರು 9 ಆಹಾರ ಆರ್ಡರ್‌ಗಳಾಗಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು ಆಹಾರ ಆರ್ಡರ್ ಎಂದು ಖ್ಯಾತಿ ಪಡೆದಿದೆ. ಬೆಂಗಳೂರಿನ ಇಬ್ಬರು ಗ್ರಾಹಕರು ಮತ್ತು ಮುಂಬೈನಲ್ಲಿ ಇಬ್ಬರು ಗ್ರಾಹಕರು ತಲಾ 3 ಲಕ್ಷ ರೂ.ಗಳ ಅತ್ಯಧಿಕ ಬಿಲ್ಲಿಂಗ್ ಮಾಡಿದ್ದಾರೆ. ಪುಣೆಯಲ್ಲಿ, ಒಬ್ಬ ಗ್ರಾಹಕರು ಒಂದೇ ಬಾರಿಗೆ 173,885 ರೂ. ಪಾವತಿ ಮಾಡಿದ್ದಾರೆ. ಅಂತೂ ಮಾಡರ್ನ್ ಕಾಲದಲ್ಲಿ ಮನೆಗೆ ಆಹಾರ ತರಿಸಿಕೊಂಡು ತಿನ್ನುವವರ ಸಂಖ್ಯೆ ಜಾಸ್ತಿಯಾಗಿರುವುದಂತೂ ಸುಳ್ಳಲ್ಲ.
















