ಬೆಂಗಳೂರು: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸಾಲು ಸಾಲು ಹಬ್ಬಗಳು ಎದುರಾಗಿದ್ದು, ತರಕಾರಿಗಳ ಬೇಡಿಕೆ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಈರುಳ್ಳಿ ಬೆಲೆಯೂ ಏರಿಕೆಯಾಗಿದ್ದು, ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ₹60ರಿಂದ ₹75ರ ವರೆಗೆ ತಲುಪಿದೆ. ಮುಂದಿನ ಕೆಲವೇ ದಿನಗಳಲ್ಲಿ ಈರುಳ್ಳಿ ಬೆಲೆ ₹100ರ ಗಡಿ ಮುಟ್ಟುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ಈ ಬಾರಿ ಈರುಳ್ಳಿ ಇಳುವರಿ ಸುಮಾರು 70ರಷ್ಟು ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದಾಸ್ತಾನು ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಮತ್ತೊಂದೆಡೆ, ಇಲ್ಲಿಂದ ಹೊರ ರಾಜ್ಯ ಹಾಗೂ ವಿದೇಶಗಳಿಗೆ ಈರುಳ್ಳಿ ರಫ್ತು ಮುಂದುವರಿದಿರುವುದು ಮತ್ತು ಹೊರಗಿನಿಂದ ಈರುಳ್ಳಿ ಆಮದು ಸ್ಥಗಿತಗೊಂಡಿರುವುದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಸಾಮಾನ್ಯ ಹಾಗೂ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಈಗಾಗಲೇ ಕೆಜಿಗೆ ₹10ರಿಂದ ₹20ರಷ್ಟು ಹೆಚ್ಚಾಗಿದೆ. ಮುಂದಿನ ಒಂದರಿಂದ ಒಂದೂವರೆ ತಿಂಗಳವರೆಗೆ ಬೆಲೆ ಏರಿಕೆ ಮುಂದುವರಿಯುವ ಸಾಧ್ಯತೆಯಿದ್ದು, ಶೀಘ್ರದಲ್ಲೇ ಈರುಳ್ಳಿ ದರ ಕೆಜಿಗೆ ₹100 ತಲುಪಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.















