ರಾ.ಹೆ.66ರ ಅಂಬಲಪಾಡಿ ಮೇಲ್ಸೇತುವೆಯ ಒಂದು ಬದಿಯ ರಸ್ತೆ ಸಂಚಾರಕ್ಕೆ ಮುಕ್ತ

ಉಡುಪಿ: ಅಂಬಲಪಾಡಿ ಮೇಲ್ಸೇತುವೆಯ ಒಂದು ಬದಿಯನ್ನು ಮಂಗಳೂರಿನಿಂದ ಕುಂದಾಪುರ ಕಡೆಗೆ ಏಕಮುಖ ವಾಹನ ಸಂಚಾರಕ್ಕೆ ಭಾನುವಾರ ಮುಕ್ತಗೊಳಿಸಲಾಯಿತು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮೇಲ್ಸೇತುವೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಚಾಲನೆ ನೀಡಿದರು.

ಮೇಲ್ಸೇತುವೆಯ ಕೆಳಭಾಗದ ಸರ್ವಿಸ್ ರಸ್ತೆ ಹೊಂಡಗಳಿಂದ ಕೂಡಿದ್ದು, ಮಳೆ ನೀರು ನಿಂತ ಪರಿಣಾಮ ವಾಹನ ಸಂಚಾರ ದುಸ್ತರವಾಗಿತ್ತು. ಇದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮವಾಗಿ ಮೇಲ್ಸೇತುವೆಯ ಒಂದು ಬದಿಯನ್ನು ಸಂಚಾರಕ್ಕೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರದಿಂದ ಮೇಲ್ಸೇತುವೆಯ ಮತ್ತೊಂದು ಬದಿಯನ್ನೂ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಸಾಧ್ಯತೆ ಇದೆ. ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾದ ಬಳಿಕ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ನಗರಸಭೆಯ ಮಾಜಿ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಉಪಾಧ್ಯಕ್ಷ ಗಜೇಂದ್ರ ಎಸ್. ಪೇಲೆಮನೆ, ಪ್ರಧಾನ ಕಾರ್ಯದರ್ಶಿಗಳಾದ ಅಭಿರಾಜ್ ಸುವರ್ಣ ಹಾಗೂ ಪ್ರದೀಪ್ ಕುಂದರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.