ಕೇರಳದ ಕಲಮಸ್ಸೆರಿಯ ಕ್ರೈಸ್ತ ಪ್ರಾರ್ಥನಾ ಸಭೆಯಲ್ಲಿ ಸ್ಪೋಟ; ಒಂದು ಸಾವು ಹಲವರಿಗೆ ಗಾಯ

ಎರ್ನಾಕುಲಂ: ಇಂದು ಬೆಳಗ್ಗೆ ಕೇರಳದ ಎರ್ನಾಕುಲಂನ ಕಲಮಸ್ಸೆರಿ ಪ್ರದೇಶದಲ್ಲಿ ಯೆಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆಯೊಂದರಲ್ಲಿ ಅನೇಕ ಸ್ಫೋಟಗಳು ಸಂಭವಿಸಿದ ನಂತರ ಒಬ್ಬರು ಸಾವನ್ನಪ್ಪಿದ್ದು ಮತ್ತು ಹಲವರು ಗಾಯಗೊಂಡಿದ್ದಾರೆ.

ಇಂದು ಬೆಳಿಗ್ಗೆ ಕನ್ವೆನ್ಷನ್ ಸೆಂಟರ್‌ನಲ್ಲಿ ಕ್ರೈಸ್ತ ಪ್ರಾರ್ಥನೆ ನಡೆಯುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಅಕ್ಟೋಬರ್ 27ರಂದು ಆರಂಭವಾದ ಮೂರು ದಿನಗಳ ಸಭೆಯು ಇಂದು ಕೊನೆಗೊಳ್ಳುವುದಿತ್ತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತುಕತೆ ನಡೆಸಿದರು ಮತ್ತು ಸಮಾವೇಶ ಕೇಂದ್ರದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ರಾಜ್ಯದ ಪರಿಸ್ಥಿತಿಯನ್ನು ಅವಲೋಕಿಸಿದರು. ಎನ್‌ಐಎ ಮತ್ತು ಎನ್‌ಎಸ್‌ಜಿಗೆ ಸ್ಥಳಕ್ಕಾಗಮಿಸಿ ಘಟನೆಯ ಕುರಿತು ತನಿಖೆ ಆರಂಭಿಸುವಂತೆ ಸೂಚನೆ ನೀಡಿದರು.

ಕಲಮಸ್ಸೆರಿ ಸಿಐ ವಿಪಿನ್ ದಾಸ್ ಅವರು ಆರಂಭಿಕ ಸ್ಫೋಟವು ಸರಿಸುಮಾರು 9 ಗಂಟೆಗೆ ಸಂಭವಿಸಿದೆ ಎಂದು ವರದಿ ಮಾಡಿದರು, ನಂತರದ ಗಂಟೆಯಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು. ಈ ಸ್ಫೋಟಗಳು ಸಂಭವಿಸಿದಾಗ 2,000 ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.

ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿಗಾಗಿ ಕಾಯಲಾಗಿದೆ.