ಮಹಾತ್ಮ ಗಾಂಧೀಜಿಯ ಕರಾವಳಿ ಭೇಟಿಗೆ ನೂರು ವರ್ಷ

ಉಡುಪಿ: ಮಹಾತ್ಮ ಗಾಂಧೀಜಿ ಅವರು ಅಸಹಕಾರ ಚಳವಳಿಯ ಸಂದರ್ಭದಲ್ಲಿ ಮಾರ್ಗದರ್ಶನ ನೀಡಲು 1920ರ ಆ. 19ರಂದು ಮೊದಲ ಬಾರಿಗೆ ಮಂಗಳೂರಿಗೆ ಬಂದಿದ್ದು, ಗಾಂಧೀಜಿ ಅವರ ಕರಾವಳಿ ಮೊದಲ ಭೇಟಿಗೆ ನೂರು ವರ್ಷಗಳು ತುಂಬಿವೆ.
ಗಾಂಧಿ ಭೇಟಿಯ ಶತಮಾನೋತ್ಸವ ಅಂಗವಾಗಿ ಎಂಜಿಎಂ ಕಾಲೇಜಿನ ಇತಿಹಾಸ ವಿಭಾಗದಿಂದ ಗಾಂಧಿ ಅಧ್ಯಯನ ಕೇಂದ್ರಲ್ಲಿ ಬುಧವಾರ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ವಿನೀತ್ ರಾವ್ ಮಾಹಿತಿ ನೀಡಿದರು.
ಅಸಹಕಾರ ಚಳವಳಿಗೆ ಮಾರ್ಗದರ್ಶನ ನೀಡಲು ಖಿಲಾಫತ್‌ ನಾಯಕ ಮೌಲಾನಾ ಶೌಕತ್ ಅಲಿ ಅವರ ಜತೆ ಮಹಾತ್ಮ ಗಾಂಧೀಜಿ ಮಂಗಳೂರಿಗೆ ಬಂದಿದ್ದರು. ಆ.19ರಂದು ಮಧ್ಯಾಹ್ನ 1ರ ಹೊತ್ತಿಗೆ ಮಂಗಳೂರು ರೈಲು ನಿಲ್ದಾಣಕ್ಕೆ ಬಂದ ಗಾಂಧೀಜಿಗೆ ಸ್ವಾಗತ ಕೋರಲಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಬಂಟ್ವಾಳ, ಮೂಲ್ಕಿ, ಕಾರ್ಕಳ, ಕುಂದಾಪುರ, ಪುತ್ತೂರು, ಕಾಸರಗೋಡಿನಿಂದ ಸಾವಿರಾರು ಜನರು ಭಾಗವಹಿಸಿದ್ದರು ಎಂದು ಸ್ಮರಿಸಿದರು.
ಬಿಳಿ ಖಾದಿ ಟೋಪಿ, ಜುಬ್ಬಾ ದೋತರ ಧರಿಸಿದ್ದ ಗಾಂಧೀಜಿ ಸರಳತೆ ಎಲ್ಲರಿಗೂ ಅಚ್ಚರಿಯಾಗಿ ಕಂಡಿತ್ತು. ಅಂದು ಗಾಂಧೀಜಿ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು ಎಂದರು.
ಮಂಗಳೂರಿನ ಕೇಂದ್ರ ಮೈದಾನದಲ್ಲಿ‌ ನಡೆದ ಬಹಿರಂಗ ಸಭೆಯಲ್ಲಿ 10 ಸಾವಿರ ಜನರನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಾರ್ವಜನಿಕ ಸಭೆಯ ಬಳಿಕ ಪುರುಷೋತ್ತಮ ಶೇಟರ ವರ್ತಕ ವಿಲಾಸ ನಿವಾಸದಲ್ಲಿ ಸಂವಾದ ಸಭೇ ನಡೆಸಿದ್ದರು. ಮರುದಿನ ಬೆಳಿಗ್ಗೆ ರೈಲಿನಲ್ಲಿ ಸೇಲಂಗೆ ತೆರಳಿದರು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಎಂ.ಜಿ. ವಿಜಯ್ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಸುಬೋಧ ಪೈ ಸ್ವಾಗತಿಸಿದರು. ಗ್ರಂಥಪಾಲಕ ಎಚ್‌.ವಿ. ಕಿಶೋರ್ ವಂದಿಸಿದರು. ಎನ್‌ಎಸ್ಎಸ್ ಅಧಿಕಾರಿ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.