ಕಡಬ: ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ನಡೆದ ವಿದ್ಯಾರ್ಥಿನಿಯರ ಮೇಲಿನ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವಶದಲ್ಲಿರುವಾತನನ್ನು ಕೇರಳದ ಮಲಪ್ಪುರಂ ನಿವಾಸಿ ಎಂಬಿಎ ವಿದ್ಯಾರ್ಥಿ ಅಬೀನ್ (23) ಎಂದು ಗುರುತಿಸಲಾಗಿದೆ. ಆಸಿಡ್ ದಾಳಿಗೊಳಗಾದ ಯುವತಿ ಹಾಗೂ ಆರೋಪಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಪ್ರೇಮ ಪ್ರಸಂಗಕ್ಕೆ ಸಂಬಂಧಿಸಿ ನಡೆದ ಕೃತ್ಯ ಎಂಬುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಯುವತಿಯ ಜೊತೆಗಿದ್ದ ಇಬ್ಬರು ಇತರೆ ವಿದ್ಯಾರ್ಥಿನಿಯರಿಗೂ ಆಸಿಡ್ ದಾಳಿಯಲ್ಲಿ ಸುಟ್ಟ ಗಾಯಗಳಾಗಿದ್ದು ಮೂವರನ್ನೂ ಚಿಕಿತ್ಸೆಗೊಳಪಡಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದ್ದಾರೆ.