ಕಾರ್ಕಳ: ನಿಟ್ಟೆ ಗುಂಡ್ಯಡ್ಕದ ಕರಿಕಲ್ಲಿನ ಕ್ವಾರೆಯಲ್ಲಿ ಸ್ಫೋಟ ಸಂಭವಿಸಿ ಒಬ್ಬ ಕಾರ್ಮಿಕ ಮೃತಪಟ್ಟ ಘಟನೆ ವರದಿಯಾಗಿದೆ. ಬಾಗಲಕೋಟೆಯ ವೆಂಕಟೇಶ್ (32) ಮೃತಪಟ್ಟ ದುರ್ದೈವಿ.
ಕೆಲಸ ಮಾಡುತ್ತಿದ್ದಾಗ ಕ್ವಾರೆಯಲ್ಲಿ ಸಂಭವಿಸಿದ ಸ್ಪೋಟದಿಂದಾಗಿ ವೆಂಕಟೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದು ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಕಾರ್ಕಳದಲ್ಲಿ ನಡೆಯುವ ಅಕ್ರಮ ಕಲ್ಲು ಗಣಿಗಾರಿಕೆಗೆ ಒಂದು ಪ್ರಾಣ ಬಲಿಯಾಗಿದ್ದು, ಅನಾಹುತಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ. ಇಂತಹ ಅಧಿಕಾರಿಗಳ ವಿರುದ್ದ ಕಠಿಣ ಕ್ರಮಕ್ಕೆ ಜರುಗಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಪುರಸಭಾ ಸದಸ್ಯ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ತಿಳಿಸಿದ್ದಾರೆ.
ತಾಲೂಕಿನಾದ್ಯಂತ ಅಕ್ರಮ ಕಲ್ಲುಗಣಿಗಾರಿಗೆ ನಡೆಯುವ ಮತ್ತು ಅದರಿಂದಾಗುವ ಅನಾಹುತಗಳ ಬಗ್ಗೆ ವಾರದ ಹಿಂದೆಯಷ್ಟೇ ಜಿಲ್ಲಾದಿಕಾರಿಯವರಿಗೆ ಮನವಿ ಸಲ್ಲಿಸಿದ್ದೆ. ಈ ಬಗ್ಗೆ ವರದಿ ನೀಡುವಂತೆ ಅವರೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಆದರೆ ಗಣಿ ಅಧಿಕಾರಿಗಳು ಮತ್ತು ತಾಲೂಕು ಹಿರಿಯ ಅಧಿಕಾರಿಗಳ ನಿರ್ಲಕ್ಷ ಮತ್ತು ವಿಳಂಬ ನೀತಿಗೆ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಳ್ಳಬೇಕಾಯಿತು. ಇಂತಹ ಅಧಿಕಾರಿಗಳು ಮತ್ತು ಅಕ್ರಮ ಗಣಿಗಾರಿಕೆ ನಡೆಸುವ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮವಾಗಬೇಕು ಇಲ್ಲವಾದರೆ ಮುಂದೆಯೂ ಇಂತಹ ಅನಾಹುತ ನಡೆಯುವ ಆತಂಕವಿದೆ ಎಂದಿದ್ದಾರೆ.
ನಿನ್ನೆ ಜಿಲ್ಲೆಗೆ ಆಗಮಿಸಿದ ರಾಜ್ಯದ ಮುಖ್ಯಮಂತ್ರಿಗಳು ಸಾರ್ವಜನಿಕರ ಸಮಸ್ಯೆ ಸ್ಪಂದಿಸದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಅಂದೇ ಇಂತಹ ಘಟನೆ ನಡೆದಿರುವುದು ವಿಪರ್ಯಾಸ. ಈ ಬಗ್ಗೆ ಮುಖ್ಯ ಮಂತ್ರಿಯವರಿಗೆ ಸಂಪೂರ್ಣ ಮಾಹಿತಿ ನೀಡಿ ಕಠಿಣ ಕ್ರಮಕ್ಕೆ ಮನವಿ ಮಾಡುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.