ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರಾವಳಿಗೆ ಒಂದೂವರೆ ಲಕ್ಷಕೋಟಿ ರೂಪಾಯಿ ಬಂಡವಾಳ: ಬೊಮ್ಮಾಯಿ

ಕಾರ್ಕಳ: ಪರಶುರಾಮ ಸೃಷ್ಟಿಯ ಮೂಲಕ ಸಾರ್ಥಕತೆ ಇದೆ. ಇಲ್ಲಿ ಭಾಗವಹಿಸಿದ ನಾವು ಭಾಗ್ಯವಂತರು. ಪರಶುರಾಮರ ಪ್ರತಿಮೆ ನಿರ್ಮಾಣದ ಮೂಲಕ ಪುರಾಣಕ್ಕೆ ಹೊಸದೊಂದು ಕುರುಹು ಸಿಕ್ಕಿದ್ದು, ಆಮೂಲಕ ಐತಿಹಾಸಿಕ ದಿನವಾಗಿ ಮೂಡಿಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಸಾಧಿಸುವುದೆ ಸಾಧಕನ ಕೆಲಸ ಎಂದು ಸಚಿವ ಸುನೀಲ್ ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಾನು ಉದ್ಘಾಟನೆಗೆ ಬಂದಿಲ್ಲ ಪರಶುರಾಮನ ಭಕ್ತನಾಗಿ ಬಂದಿದ್ದೇನೆ. ನನ್ನ ಮನೆಯ ಆರಾಧ್ಯ ದೇವಿ ಎಲ್ಲಮ್ಮ ದೇವಿಯ ಆರಾಧಕ ನಾನು. ಸವದತ್ತಿಯಲ್ಲಿ ಪರಶುರಾಮ ದೇವಾಲಯವಿದ್ದು, ಅದನ್ನು ಜೀರ್ಣೋದ್ಧಾರ ಮಾಡಲು ಶಿಲಾನ್ಯಾಸ ಮಾಡಿ ಬಂದಿದ್ದೇನೆ ಎಂದರು.

ಪರಶುರಾಮ ಥೀಮ್ ಪಾರ್ಕ್ ನಿರ್ಮಾಣದಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಆರ್ಥಿಕ ಬಲವರ್ಧನೆಗೆ ಇದು ಸಾಕ್ಷಿಯಾಗಲಿದೆ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಕ್ಕೆ ವಿಫುಲ ಅವಕಾಶಗಳಿದ್ದು, ಅದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ . ದೇವಾಲಯಗಳ ಮೂಲಕ ಪ್ರವಾಸೋದ್ಯಮ, ಕರಾವಳಿಯ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮಕ್ಕೆ ಮಾಸ್ಟರ್ ಪ್ಲಾನ್ ಮಾಡುವ ಮೂಲಕ ಆರ್ಥಿಕವಾಗಿ ಬಲಪಡಿಸಲು ಸರಕಾರ ಶಕ್ತವಾಗಿದೆ.

ತುಳುನಾಡಿನ ಜನರು ಪರಿಶ್ರಮಿಗಳು. ಕೃಷಿ ಮೀನುಗಾರಿಕೆ ಸಣ್ಣ ಪುಟ್ಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಆರ್ಥಿಕತೆ ಹೆಚ್ಚಿಸಬೇಕಾದರೆ ಕೈಗಾರೀಕೀಕರಣ, ಸಾರಿಗೆ ಸಂಪರ್ಕ ಹಾಗೂ ಮೂಲ ಸೌಕರ್ಯಗಳು ಬಹುಮುಖ್ಯ ಪಾತ್ರವಹಿಸುತ್ತವೆ. ಕರಾವಳಿಯಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೂಡಿಕೆಗಾಗಿ‌ ಒಂದೂವರೆ ಲಕ್ಷಕೋಟಿ ರೂಪಾಯಿ ಬಂಡವಾಳ ಹರಿದು ಬರುತ್ತಿದೆ ಅದನ್ನು ಸಂಪೂರ್ಣ ವಾಗಿ ವಿನಿಯೋಗಿಸುವ ಮೂಲಕ ಕರಾವಳಿಯನ್ನು ಆರ್ಥಿಕವಾಗಿ ಬಲಪಡಿಸಬಹುದಾಗಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ

ಚುನಾವಣೆಯಲ್ಲಿ ಸೋಲಿನ ಭಯದಿಂದ ಸಿದ್ದರಾಮಯ್ಯನವರು ಮಾನಸಿಕ ಸ್ಥಿಮಿತ ಕಳೆದುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಿಜೆಪಿಯವರಿಗೆ ಸೋಲಿನ ಭಯ ಕಾಡುತ್ತಿದೆ, ಆದ್ದರಿಂದ ಪ್ರಧಾನಿ‌ ಮೋದಿಯವರನ್ನು ‌ಪದೇ ಪದೇ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯನವರ ಆರೋಪಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಬೊಮ್ಮಾಯಿ, ರಾಹುಲ್ ಗಾಂಧಿ ಹೋದ ಕಡೆ ಜನರು ಸೇರುತ್ತಿಲ್ಲ ಹಾಗಾಗಿ ಸಿದ್ದರಾಮಯ್ಯನವರು ಹತಾಶೆಯಿಂದ ಇಂತಹ ಹೇಳಿಕೆ ನೀಡಿದ್ದಾರೆ ಎಂದರು.

ಬಳಿಕ ಅವರು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಸಂಘದ ಲೋಗೋ ಬಿಡುಗಡೆಗೊಳಿಸಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ 25 ವರ್ಷಗಳು ತುಂಬಿರುವುದು ಸಂತಸದ ವಿಚಾರ. ಗ್ರಾಮೀಣ ಪತ್ರಕರ್ತರಿಗೆ ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕಾರ್ಕಳ ಪತ್ರಕರ್ತರ ಸಂಘಕ್ಕೆ ನಿವೇಶನ ಮಂಜೂರಾತಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಗೇರು ನಿಗಮ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಎಂಎಲ್‌ಸಿ ರವಿ ಕುಮಾರ್, ಉದಯ್ ಕುಮಾರ್ ಶೆಟ್ಟಿ, ಶಾಸಕ ಲಾಲಾಜಿ ಮೆಂಡನ್ ಚಿತ್ರನಟ ರಿಷಬ್ ಶೆಟ್ಟಿ , ಶಾಸಕ ರಘುಪತಿ ಭಟ್, ಮಟ್ಟಾರು ರತ್ನಾಕರ್ ಹೆಗ್ಡೆ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಚೆನ್ನಪ್ಪ ಶೆಟ್ಟಿ , ಜಿಪಂ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ , ಎಸ್ ಪಿ ಅಕ್ಷಯ್ ಹಾಕೆ ಮಚಿಂದ್ರ ಉಪಸ್ಥಿತರಿದ್ದರು. ಇದೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.

ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಪ್ರಸ್ತಾವಿಸಿದರು. ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ವಂದಿಸಿದರು.