ಚಿಲ್ಲರೆ ಮತ್ತು ಸಣ್ಣ ವ್ಯಾಪಾರಿಗಳಿಗಾಗಿ ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ ಪ್ಲಾಟ್ ಫಾರ್ಮ್

ನವದೆಹಲಿ: ಓಪನ್ ನೆಟ್ ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒ.ಎನ್.ಡಿ.ಸಿ), ಕೇಂದ್ರ ಸರ್ಕಾರ ಬೆಂಬಲಿತ ಯೋಜನೆಯಾಗಿದ್ದು, ಇದು ದೇಶದ ಎಲ್ಲಾ ಭಾಗಗಳಲ್ಲಿನ ಸಣ್ಣ ವ್ಯಾಪಾರಿಗಳು ಮತ್ತು ಮಾರಾಟಗಾರರಿಗೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ದೊಡ್ಡ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಂದ ಸಾಮಾನ್ಯವಾಗಿ ನಿಯೋಜಿಸಲಾದ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ದೇಶದ ಚಿಲ್ಲರೆ ವ್ಯಾಪಾರಿಗಳು ಮತ್ತು ಮಾರಾಟಗಾರರು ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ತಮ್ಮ ಉತ್ಪನ್ನಗಳನ್ನು ಮಾರಲು ಅಭಿವೃದ್ದಿ ಪಡಿಸಲಾದ ವೇದಿಕೆ ಇದಾಗಿದೆ.

ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್‌ಗಳ ಮೂಲಕ ಸರಕು ಮತ್ತು ಸೇವೆಗಳ ವಿನಿಮಯದ ಎಲ್ಲಾ ಅಂಶಗಳಿಗೆ ಮುಕ್ತ ನೆಟ್‌ವರ್ಕ್‌ಗಳನ್ನು ಉತ್ತೇಜಿಸುವ ಗುರಿಯ ಒಂದು ಉಪಕ್ರಮವಾಗಿದೆ. ಒ.ಎನ್.ಡಿ.ಸಿ ಯು ಓಪನ್ ಸೋರ್ಸ್ ವಿಧಾನವನ್ನು ಬಳಸುತ್ತದೆ. ಓಪನ್ ಸೋರ್ಸ್ ನಲ್ಲಿ ವಿವರಗಳು ಮತ್ತು ನೆಟ್ ವರ್ಕ್ ಮೇಲೆ ಯಾರದೇ ಒಬ್ಬರ ಪಾರುಪತ್ಯವಿಲ್ಲದೆ ಎಲ್ಲರಿಗೂ ಮುಕ್ತವಾಗಿರುತ್ತದೆ. ಇದು ಇ-ಕಾಮರ್ಸ್ ಜಗತ್ತಿನಲ್ಲಿ ಅಮೆಜಾನ್ ಮತ್ತು ವಾಲ್ ಮಾರ್ಟ್ ಸ್ವಾಮ್ಯದ ಫ್ಲಿಪ್ ಕಾರ್ಟ್ ನಂತಹ ದಿಗ್ಗಜರ ದ್ವಿಸ್ವಾಮ್ಯವನ್ನು ಕೊನೆಗೊಳಿಸುತ್ತದೆ.

ಈ ವರ್ಷದ ಮೇ ತಿಂಗಳಲ್ಲಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆಯು ದೆಹಲಿ, ಬೆಂಗಳೂರು, ಕೊಯಮತ್ತೂರು, ಭೋಪಾಲ್ ಮತ್ತು ಶಿಲ್ಲಾಂಗ್‌ನಂತಹ ನಗರಗಳಲ್ಲಿ ಒ.ಎನ್.ಡಿ.ಸಿ ಯ ಪರೀಕ್ಷಾರ್ಥ ಚಾಲನೆ ನಡೆಸಿದೆ. ಕನಿಷ್ಟ 150 ಸಣ್ಣ ಮಾರಾಟಗಾರರನ್ನು ಈ ಯೋಜನೆಯೊಳಗೆ ತರುವ ಯೋಚನೆ ಇಲಾಖೆಗಿದೆ.

ಪ್ಲಾಟ್‌ಫಾರ್ಮ್ ಖರೀದಿದಾರರು ಮತ್ತು ಮಾರಾಟಗಾರರನ್ನು ಒಟ್ಟು ಮಾಡುವ ಇಂಟರ್ಫೇಸ್‌ಗಳ ಮಧ್ಯದಲ್ಲಿದೆ. ಪ್ಲಾಟ್ ಫಾರ್ಮ್ ನಲ್ಲಿ ಉತ್ಪನ್ನಗಳನ್ನು ಹುಡುಕಿದಾಗ ಪಾಲುದಾರ ಅಪ್ಲಿಕೇಶನ್(ಪೇಟಿಎಮ್) ಪ್ಲಾಟ್‌ಫಾರ್ಮ್‌ನ ಸಂಪರ್ಕದಲ್ಲಿರುವ ಮಾರಾಟಗಾರರ ಇಂಟರ್‌ಫೇಸ್‌ಗಳಿಗೆ ಅದನ್ನು ಸಂಪರ್ಕಿಸುತ್ತದೆ, ಅದು ನಿರ್ದಿಷ್ಟ ಐಟಂ ಅನ್ನು ಖರೀದಿಸಬಹುದಾದ ಎಲ್ಲ ಕಂಪನಿಗಳನ್ನು ಪಟ್ಟಿ ಮಾಡುತ್ತದೆ. ಇದರಿಂದ ಖರೀದಿದಾರರಿಗೆ ಹೆಚ್ಚು ಆಯ್ಕೆಗಳು ದೊರೆಯುತ್ತವೆ, ಮಾತ್ರವಲ್ಲ ಉತ್ಪನ್ನಗಳ ಬೆಲೆಯೂ ಕಡಿಮೆ ಇರುತ್ತದೆ. ಅತ್ತ ಸಣ್ಣ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಕಲ್ಪಿಸಿಕೊಡುತ್ತದೆ.

ಅಮೇರಿಕಾದ ದಿಗ್ಗಜ ಸಂಸ್ಥೆ ಮೈಕ್ರೋಸಾಫ್ಟ್ ಒ.ಎನ್.ಡಿ.ಸಿ ಸೇರಿದ ಮೊದಲ ದೊಡ್ಡ ಟೆಕ್ ಕಂಪನಿಯಾಗಿದೆ. ಬೆಂಗಳೂರು ಮೂಲದ ವೂಲಿ ಫಾರ್ಮ್ಸ್, ರೆಸ್ಟೋರೆಂಟ್ ನಿರ್ವಹಣೆ ವೇದಿಕೆ ಪೇಟ್ ಪೂಜಾ ಕೂಡಾ ಒ.ಎನ್.ಡಿ.ಸಿ ಅನ್ನು ಸೇರಿಕೊಂಡಿದೆ.