ಉಡುಪಿ: ಓಣಂ ಕೇರಳಿಗರ ಅತ್ಯಂತ ವಿಶಿಷ್ಟ ಹಬ್ಬವಾಗಿದ್ದು, ಇದನ್ನು ಯಾವುದೇ ಜಾತಿ, ಮತ ಭೇದವಿಲ್ಲದೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಓಣಂ ಹಬ್ಬ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತದೆ ಎಂದು ಮೀನುಗಾರಿಕಾ ಹಾಗೂ
ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್‌ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ ಓಣಂ ಹಬ್ಬದ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ದೀಪಾವಳಿ ಹಬ್ಬದ ಮೂಲಕ ಬಲಿಚಕ್ರವರ್ತಿಯನ್ನು ಕರೆದರೆ, ಕೇರಳಿಗರು ಓಣಂ ಹಬ್ಬದ ಮೂಲಕ ಬಲಿಚಕ್ರವರ್ತಿಯ ಆರಾಧನೆ ಮಾಡುತ್ತಾರೆ. ಕೇರಳಿಗರು ವಿಶಿಷ್ಟ ಗುಣ ಹೊಂದಿರುವ ಅತ್ಯಂತ ಬುದ್ಧಿವಂತ ಜನರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿಯೇ ಕೇರಳ ರಾಜ್ಯ ಪ್ರಥಮ ಸ್ಥಾನ ಪಡೆದಿರುವುದೇ ಇದಕ್ಕೆ ಸಾಕ್ಷಿ. ಕೇರಳ ಶಿಕ್ಷಣ ಮಾತ್ರವಲ್ಲ ಧಾರ್ಮಿಕ ಹಾಗೂ ದೇವಾಲಯಗಳ ನಾಡು ಎಂಬ ಗೌರವಕ್ಕೂ ಪಾತ್ರವಾಗಿದೆ ಎಂದರು.
ನಟ ಅರವಿಂದ ಬೋಳಾರ್ ಮಾತನಾಡಿ, ಕಲಿಕೆಯಲ್ಲಿ ಕೇರಳದವರ ಸಾಧನೆ ಅಸಾಧಾರಣವಾಗಿದ್ದು, ಇತರೆ ರಾಜ್ಯಗಳಿಗೆ ಹೋಲಿಸಿದರೆ ಕೇರಳ ಯುವತಿಯರು ವಿದ್ಯೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ಕೇರಳಿಗರಿಗೆ ಎಲ್ಲಿಗೆ ಹೋದರು ಗೌರವ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಓಣಂ ಪೂಕಳಂ ಸ್ಪರ್ಧೆಯನ್ನು ಆಯೋಜಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಮೂಳೆ ತಜ್ಞ ಡಾ. ಬೆಂಜಮಿನ್ ಜೋಸೆಫ್, ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ, ನಿತ್ಯಾನಂದ ಒಳಕಾಡು ಅವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ 317 ಸಿ ಜಿಲ್ಲಾ ಗವರ್ನರ್ ವಿ.ಜಿ. ಶೆಟ್ಟಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ. ಎಂ.ಎಸ್. ವಲಿಯತ್ತಾನ್, ಕೇರಳ ಕಲ್ಚರಲ್ ಅಂಡ್ ಸೋಷಿಯಲ್ ಸೆಂಟರ್ ಸಂಸ್ಥೆಯ ಕಾರ್ಯದರ್ಶಿ ಕೆ.ವಿ. ಕುಮಾರ್, ಕೋಶಾಧಿಕಾರಿ ಪ್ರಸನ್ನರಾಜ್, ಸುಗುಣ ಕುಮಾರ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪಿ.ಎ. ಮೋಹನ್‌ದಾಸ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ಬಿಂದು ತಂಗಪ್ಪನ್ ಕಾರ್ಯಕ್ರಮ ನಿರೂಪಿಸಿದರು.












