ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಅರ್ಚಕರು ವಿಜ್ಞಾನಿಗಳ ಸಮ್ಮುಖದಲ್ಲಿ ‘ಸೂರ್ಯ ತಿಲಕ’ (Surya Tilak) ಪ್ರಯೋಗವನ್ನು ಯಶಸ್ವಿಯಾಗಿ ಪರೀಕ್ಷೆ ಮಾಡಿದ್ದಾರೆ. ಏಪ್ರಿಲ್ 17 ರಂದು ರಾಮನವಮಿ ಹಬ್ಬದ ಸಂದರ್ಭದಲ್ಲಿ ಸೂರ್ಯನ ಕಿರಣಗಳು ವಿಶೇಷವಾಗಿ ತಯಾರಿಸಲಾದ ಕನ್ನಡಿಯ ಮೂಲಕ ಪ್ರತಿಫಲನಗೊಂಡು ಸೂರ್ಯವಂಶಿ ರಘುರಾಮನ ಹಣೆಗೆ ತಿಲಕವನ್ನಿಡಲಿದೆ. ಅದಾಗಲೇ ಎರಡು ಬಾರಿ ಇದನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.
CSIR-ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ನ ವಿಜ್ಞಾನಿಗಳು “ಸೂರ್ಯ ತಿಲಕ” ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದ್ದಾರೆ. ಇದು ಮಧ್ಯಾಹ್ನದ ಸಮಯ ಸುಮಾರು ಆರು ನಿಮಿಷಗಳ ಕಾಲ ರಾಮಲಲ್ಲಾ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣವನ್ನು ಏಕೀಕೃತಗೊಳಿಸಿ ತಿಲಕವಿಟ್ಟಂತೆ ಗೋಚರಿಸುತ್ತದೆ.
ದೇವಾಲಯದ ಮೂರನೇ ಮಹಡಿಯಲ್ಲಿ ಬೆಳಕಿನ ಮಸೂರವನ್ನು ಇರಿಸಲಾಗುವುದು, ಇದು ಪೈಪ್ಗಳಲ್ಲಿ ಇರಿಸಲಾಗಿರುವ ಪ್ರತಿಫಲಕಗಳ ಸರಣಿಯ ಮೂಲಕ ಸೂರ್ಯ ಕಿರಣವನ್ನು ನೆಲಮಹಡಿಗೆ ರವಾನಿಸುತ್ತದೆ ಎಂದು ಸಿಬಿಆರ್ಐ ಮುಖ್ಯ ವಿಜ್ಞಾನಿ ಆರ್.ಧರಮರಾಜು ಹೇಳಿದ್ದಾರೆ.
“ಸೂರ್ಯ ತಿಲಕ” ವನ್ನು ಎಸ್ ಕೆ ಪಾಣಿಗ್ರಾಹಿ ನೇತೃತ್ವದ ವಿಜ್ಞಾನಿಗಳ ತಂಡ ವಿನ್ಯಾಸಗೊಳಿಸಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಂಸ್ಥೆಯು ಖಗೋಳ ಅವಲೋಕನಗಳ ಆಧಾರದ ಮೇಲೆ ಮಾಹಿತಿಗಳನ್ನು ನೀಡಿದೆ ಮತ್ತು “ಸೂರ್ಯ ತಿಲಕಕ್ಕಾಗಿ ಯಾಂತ್ರಿಕ ಮತ್ತು ರಚನಾತ್ಮಕ ವಿನ್ಯಾಸಕ್ಕೆ ಕೊಡುಗೆ ನೀಡಿದೆ ಎಂದು CBRI ಯ ಹಿರಿಯ ವಿಜ್ಞಾನಿ ದೇಬ್ದುತ್ತ ಘೋಷ್ ಹೇಳಿದ್ದಾರೆ.