ಮಂಗಳೂರಿಗೆ ಎಂಟ್ರಿಕೊಟ್ಟ ಓಮಿಕ್ರಾನ್: ಏಕಾಏಕಿ ಐವರಲ್ಲಿ ಸೋಂಕು ಪತ್ತೆ

ಮಂಗಳೂರು: ಕೊರೊನಾ ರೂಪಾಂತರಿ ತಳಿ ಓಮಿಕ್ರಾನ್ ಸೋಂಕು ಮಂಗಳೂರಿಗೆ ಎಂಟ್ರಿಕೊಟ್ಟಿದೆ. ಜಿಲ್ಲೆಯಲ್ಲಿ ಇಂದು ಐದು ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. 2 ಕ್ಲಸ್ಟರ್​ಗಳಲ್ಲಿ ಸೋಂಕು ಕಂಡು ಬಂದಿವೆ. ಕ್ಲಸ್ಟರ್​ ಒಂದರಲ್ಲಿ 4 ಮತ್ತು ಕ್ಲಸ್ಟರ್​ ಎರಡರಲ್ಲಿ 1 ಒಮಿಕ್ರಾನ್​ ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 14ಕ್ಕೆ ಹೆಚ್ಚಳವಾಗಿದೆ. ಕೊರೊನಾ ಪಾಸಿಟಿವ್ ಬಂದವರ ಸ್ವ್ಯಾಬ್​ನ ಸ್ಯಾಂಪಲ್​ನ್ನು ಜಿನೋಮಿಕ್ ಸೀಕ್ವೆನ್ಸ್ ಗೆ ಜಿಲ್ಲಾಡಾಳಿತ ರವಾನಿಸಿತ್ತು.

ಈ ವರದಿಯಲ್ಲಿ 5 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ. ಒಟ್ಟಾರೆ ಸೋಂಕಿತರಲ್ಲಿ 4 ಮಂದಿ ಹೈಸ್ಕೂಲ್ ವಿದ್ಯಾರ್ಥಿಗಳು ಹಾಗು ಓರ್ವ ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿ ಇದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಸದ್ಯ ಸೋಂಕಿತರ ಆರೋಗ್ಯದ ಮೇಲೆ ಜಿಲ್ಲಾಡಾಳಿತ ತೀವ್ರ ನಿಗಾ ಇಟ್ಟಿದ್ದು ಕ್ವಾರಂಟೀನ್​ಗಾಗಿ ಸೂಕ್ತ ವ್ಯವಸ್ಥೆ ಮಾಡಿದೆ.