ಮಂಗಳೂರು: ನಗರದ ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ ಮೆಂಟ್ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್ ವತಿಯಿಂದ ಅಂತರ್ ತರಗತಿಯ ‘ವಾಣಿಜ್ಯ ದಿನಾಚರಣೆ – ಒಲಿಂಪಸ್ 2022’ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತ್ರಿಶಾ ಕ್ಲಾಸಸ್ ಮಂಗಳೂರು ಕೇಂದ್ರದ ಮುಖ್ಯಸ್ಥೆ ಶ್ರೀಮತಿ ಯಶಸ್ವಿನಿ ಯಶ್ಪಾಲ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನಲ್ಲಿ ಈ ರೀತಿಯ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತ್ರಿಶಾ ಕಾಲೇಜಿನ ಪ್ರಾಂಶುಪಾಲ ಪ್ರೋ. ಗಿರೀಶ್ ಮಾಡ್ಲ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಬೌದ್ಧಿಕತೆಯನ್ನು ವಿಕಸನಗೊಳಿಸುವುದು ಮಾತ್ರವಲ್ಲದೆ, ಮುಂದೆ ಅವರು ಉತ್ತಮ ಅನುಭವದೊಂದಿಗೆ ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗಲು ಹಾಗೂ ವಾಣಿಜ್ಯ ಕ್ಷೇತ್ರದಲ್ಲಿ ಆಗುತ್ತಿರುವ ವಿವಿಧ ಬದಲಾವಣೆಗೆ ತನ್ನನ್ನು ತಾನು ತೆರೆದುಕೊಳ್ಳಲು ಸಹಕಾರಿಯಾಗುತ್ತವೆ ಎಂದರು.
ವೇದಿಕೆಯಲ್ಲಿ ತ್ರಿಶಾ ಸಂಜೆ ಕಾಲೇಜಿನ ಪ್ರಾಂಶುಪಾಲೆ ಪ್ರೋ. ಸುಪ್ರಭಾ, ಕಾಲೇಜಿನ ಕಾಮರ್ಸ್ ಅಸೋಸಿಯೇಶನ್ನ ಅಧ್ಯಕ್ಷೆ ಪ್ರೋ. ಸಹನಾ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕಾರುಣ್ಯ ನಿರೂಪಿಸಿದರು. ಸಂಜನಾ ಸ್ವಾಗತಿಸಿ, ಮನೀಷಾ ವಂದಿಸಿದರು.