ಒಲಿಂಪಿಕ್ಸ್ ಕುಸ್ತಿ: ರವಿಕುಮಾರ್ ದಹಿಯಾ ಫೈನಲ್‌ಗೆ ಪ್ರವೇಶ

ಟೋಕಿಯೊ: ಭಾರತದ ಕುಸ್ತಿಪಟು ರವಿಕುಮಾರ್ ದಹಿಯಾ ಪುರುಷರ 57 ಕೆ.ಜಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶಿಸಿದ್ದಾರೆ.

ಈ ಮೂಲಕ ರವಿಕುಮಾರ್ ಒಲಿಂಪಿಕ್ಸ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ. ಇಂದು ನಡೆದ ಸೆಮಿಫೈನಲ್ ಮುಖಾಮುಖಿಯಲ್ಲಿ ರವಿಕುಮಾರ್ ಕಜಕಿಸ್ತಾನದ ನುರಿಸ್ಲಾಮ್ ಸನಾಯೆವ್ ವಿರುದ್ಧ ಗೆಲುವು ದಾಖಲಿಸಿದರು

ಕಂಚು ಗೆದ್ದ ಭಾರತದ ಬಾಕ್ಸರ್ ಲವ್ಲಿನಾ

ಭಾರತದ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸುವ ಮೂಲಕ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.  ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

ಜಾವೆಲಿನ್ ಥ್ರೋ: ನೀರಜ್ ಚೋಪ್ರಾ ಫೈನಲ್ಸ್‌ಗೆ ಲಗ್ಗೆ

ಜಾವೆಲಿನ್ ಥ್ರೋ ವಿಭಾಗದಲ್ಲಿ ಅಥ್ಲೀಟ್ ನೀರಜ್ ಚೋಪ್ರಾ ಫೈನಲ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ 86.5 ಮೀಟರ್‌ ದೂರಕ್ಕೆ ಜಾವೆಲಿನ್‌ ಎಸೆದು ನೇರವಾಗಿ ಫೈನಲ್ಸ್‌ಗೆ ಅರ್ಹತೆ ಗಳಿಸಿದ್ದಾರೆ.

ದೀಪಕ್ ಪೂನಿಯಾಗೆ ಸೋಲು: ಕಂಚಿನ ಪದಕದ ಆಸೆ ಜೀವಂತ

ಟೋಕಿಯೊ ಒಲಿಂಪಿಕ್ಸ್ ಪುರುಷರ 86 ಕೆ.ಜಿ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ ಕುಸ್ತಿಪಟು ದೀಪಕ್ ಪೂನಿಯಾ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು.

ಅಂತಿಮ ನಾಲ್ಕರ ಘಟ್ಟದಲ್ಲಿ ದೀಪಕ್ ಪುನಿಯಾ, ಅಮೆರಿಕದ ಡೇವಿಡ್ ಮೊರಿಸ್ ವಿರುದ್ಧ 10-0 ಅಂತರದಲ್ಲಿ ಸೋಲಿಗೆ ಶರಣಾದರು. ಈಗ ಕಂಚಿನ ಪದಕಕ್ಕಾಗಿ ಹೋರಾಟಲಿದ್ದಾರೆ. ಈ ಮೂಲಕ ಪದಕದ ಆಸೆ ಜೀವಂತವಾಗಿದೆ.