ಸೆಲೆಬ್ರಿಟಿಗಳು ತಮ್ಮ ನಿಶ್ಚಿತಾರ್ಥ, ಮದುವೆಯನ್ನು ಅದ್ದೂರಿಯಾಗಿಯೇ ಮಾಡಿಕೊಳ್ಳುತ್ತಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಡ್ರೆಸ್ಗಳು, ಆಭರಣಗಳ ಜೊತೆಗೆ ಪ್ಯಾಲೇಸ್ಗಳಲ್ಲಿ ಸಮಾರಂಭ ಆಯೋಜಿಸುತ್ತಾರೆ.ನಟ, ಬಿಗ್ ಬಾಸ್ ಸ್ಪರ್ಧಿ ಪ್ರಥಮ್ ಮನೆಯವರು ಮೆಚ್ಚಿದ ಹುಡುಗಿಯೊಂದಿಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ವಿಶೇಷ ಡೆಕೋರೇಶನ್ ಮಾಡಿಕೊಳ್ಳುತ್ತಾರೆ. ನೂರಾರು ಬಗೆಯ ಖಾದ್ಯಗಳನ್ನು ತಯಾರಿಸಿ ಭೋಜನ ಸಿದ್ಧಪಡಿಸುತ್ತಾರೆ. ಒಟ್ಟಿನಲ್ಲಿ ಹೇಳ್ಬೇಕಂದ್ರೆ ತಮ್ಮ ಅಂತಸ್ತು ಮತ್ತು ಗೌರವಕ್ಕೆ ತಕ್ಕಂತೆ ಕಾರ್ಯಕ್ರಮಗಳನ್ನು ನಡೆಸುತ್ತಾರೆ.
ಆದರೆ ಸ್ಯಾಂಡಲ್ವುಡ್ ನಟ ಪ್ರಥಮ್ ಇದಕ್ಕೆಲ್ಲ ತದ್ವಿರುದ್ಧ. ಸರಳವಾಗಿ ಬದುಕು ನಡೆಸುತ್ತಿರುವ ಪ್ರಥಮ್, ಯಾವುದೇ ಆಡಂಬರವಿಲ್ಲದೇ ಮನೆಯವರು ಮೆಚ್ಚಿದ ಹುಡುಗಿಯೊಂದಿಗೆ ಇಂದು ಗೌಪ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಖುದ್ದಾಗಿ ಅವರೇ ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯ ಜೊತೆಗೆ ತಮ್ಮ ಕೈಯನ್ನು ಇರಿಸಿ ಉಂಗುರವನ್ನು ಪ್ರಧಾನವಾಗಿ ತೋರಿಸುವಂತೆ ಕ್ಲಿಕ್ಕಿಸಲಾದ ಫೋಟೋವನ್ನು ಹಂಚಿಕೊಂಡಿರುವ ಪ್ರಥಮ್, ಉದ್ದನೆಯ ಕ್ಯಾಪ್ಶನ್ ಬರೆದಿದ್ದಾರೆ. ತಾವು ಎಂಗೇಜ್ಮೆಂಟ್ ಮಾಡಿಕೊಂಡಿರುವುದು ತಮ್ಮ ಆತ್ಮೀಯರಿಗೆ ತಿಳಿಯುವ ಉದ್ದೇಶದಿಂದ ಈ ಪೋಸ್ಟ್ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ.
ಪ್ರಥಮ್ ಪೋಸ್ಟ್ ಹೀಗಿದೆ…: “ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ. ನನ್ನ ಎಂಗೇಜ್ಮೆಂಟ್ ಈ ದೇಶದ ದೊಡ್ಡ ಸುದ್ದಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ಟಿಕೊಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ. ಹೀಗೇ ಇದ್ದು ಬಿಡ್ತೀನಿ. ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ” ಎಂದು ಬರೆದಿದ್ದಾರೆ.
ಬಿಗ್ಬಾಸ್ನಲ್ಲಿ ಗೆದ್ದಿರುವ ಅಷ್ಟೂ ಹಣವನ್ನು ವಿಶೇಷ ಚೇತನ ಅಭಿವೃದ್ಧಿಗೆ ನೀಡಿ ನಿಜಕ್ಕೂ ಒಳ್ಳೆ ಹುಡ್ಗ ಎನಿಸಿಕೊಂಡರು. ದೇವರಂಥಾ ಮನುಷ್ಯ, ರಾಜು ಕನ್ನಡ ಮೀಡಿಯಂ ಮತ್ತು ನಟ ಭಯಂಕರ ಸಿನಿಮಾಗಳಲ್ಲಿ ಪ್ರಥಮ್ ನಾಯಕನಾಗಿ ನಟಿಸಿದ್ದಾರೆ. ನಟ ಭಯಂಕರ ಸಿನಿಮಾವನ್ನು ಅವರೇ ನಿರ್ದೇಶಿಸಿದ್ದಾರೆ. ಈ ಚಿತ್ರ ತಕ್ಕಮಟ್ಟಿಗೆ ಹಿಟ್ ಆಗಿತ್ತು.
ಪ್ರಥಮ್ ಬಿಗ್ಬಾಸ್ ಮೂಲಕ ಕನ್ನಡಿಗರಿಗೆ ಚಿರಪರಿಚಿತರು. ತಮ್ಮನ್ನು ತಾವು ಒಳ್ಳೆ ಹುಡ್ಗ ಎಂದೇ ಕರೆದುಕೊಳ್ಳುತ್ತಿದ್ದ ಪ್ರಥಮ್ ನಂತರದಲ್ಲಿ ಒಳ್ಳೆ ಹುಡ್ಗ ಪ್ರಥಮ್ ಅಂತಲೇ ಫೇಮಸ್ ಆದರು. ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲೂ ಕೂಡ ಇದೇ ಹೆಸರನ್ನು ಹಾಕಿಕೊಂಡಿದ್ದಾರೆ. ಮೂಲತಃ ಪ್ರಥಮ್ ಚಾಮರಾಜನಗರದವರಾಗಿದ್ದು, ಬಿಗ್ಬಾಸ್ ಸೀಸನ್ 4 ರಲ್ಲಿ ಭಾಗವಹಿಸಿ ವಿನ್ನರ್ ಆದರು.