ಹಿರಿಯಡಕ : ಚಾಣಕ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ಸ್ ಹೆಬ್ರಿ ಇವರ ನೇತೃತ್ವದಲ್ಲಿ ಮುನಿಯಾಲು ಉದಯಕೃಷ್ಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ರೈತರ ಸಹಕಾರಿ ಸಂಘ ಹಿರಿಯಡಕ ಸಹಯೋಗದೊಂದಿಗೆ ವಾಯ್ಸ್ ಆಪ್ ಚಾಣಕ್ಯ 2022 ಸೀಸನ್- 5 ಉಡುಪಿ ಜಿಲ್ಲಾ ಮಟ್ಟದ ಟ್ರ್ಯಾಕ್ ಸಂಗೀತ ಸ್ಪರ್ಧೆ ಕಾರ್ಯಕ್ರಮವು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಯೋಜಕ ಹೆಬ್ರಿ ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣ ಎಂಬುದು ಕೇವಲ ಅಂಕ ಗಳಿಸುವುದು ಮಾತ್ರ ಅಲ್ಲ. ಶಿಕ್ಷಣದ ಜೊತೆಯಲ್ಲಿ ಬದುಕಿನ ಸವಾಲುಗಳನ್ನು ಎದುರಿಸುವ ಪೂರಕ ಶಿಕ್ಷಣದ ಅಗತ್ಯತೆಯನ್ನು ಈಡೇರಿಸಲು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಸಾಹಿತ್ಯ, ಕಲೆ, ಸಂಗೀತ, ನೃತ್ಯ ಕಲಾ ಪ್ರಕಾರಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ 8 ವರ್ಷಗಳ ಹಿಂದೆ ಸ್ಥಾಪನೆಯಾದ ಸಂಸ್ಥೆಯು ಈ ಮಟ್ಟಕ್ಕೆ ಬೆಳೆದು ಸತತ 5 ವರ್ಷಗಳಿಂದ ಟ್ರ್ಯಾಕ್ ಸಂಗೀತ ಸ್ಪರ್ಧೆಯನ್ನು ಎಲ್ಲರ ಪ್ರೋತ್ಸಾಹದಿಂದ ನಡೆಸಿಕೊಂಡು ಬರುತ್ತಿದೆ ಎಂದರು.
ಹಿರಿಯಡ್ಕ ರೈತರ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಾಂತರಾಮ ಸೂಡ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಇದೊಂದು ಸದವಕಾಶ. ಎಲ್ಲರಲ್ಲೂ ಒಂದಲ್ಲ ಒಂದು ಪ್ರತಿಭೆ ಇದೆ. ಅವಕಾಶ ದೊರೆತು ಸದುಪಯೋಗ ಪಡಿಸಿಕೊಂಡಾಗ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆಯೋಜಕ ಹೆಬ್ರಿ ಉದಯಕುಮಾರ್ ಶೆಟ್ಟಿಯವರು ಶ್ರದ್ದೆ, ನಿಷ್ಠೆಯಿಂದ ಕಾರ್ಯಕ್ರಮಗಳನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ಇಂತಹ ಕಾರ್ಯಕ್ರಮಗಳನ್ನು ಮಾಡಲು ದೇವರು ಕೃಪೆಯನ್ನು ಕರುಣಿಸಲಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ. ಸೀಮಾ ಜಿ. ಕೆ. ವಹಿಸಿ ಮಾತನಾಡಿ ಕಾಲೇಜಿನಲ್ಲಿ ಮನಸ್ಸಿಗೆ ಮುದನೀಡುವ ಸಂಗೀತ ಸ್ಪರ್ಧೆ ಕಾರ್ಯಕ್ರಮ ನಡೆಯುತ್ತಿರುವುದು ನಮೆಗೆಲ್ಲ ಹರ್ಷ ತಂದಿದೆ. ಇಂತಹ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನೂ ನಡೆಯಲಿ ಎಂದರು.
ಬೊಮ್ಮರಬೆಟ್ಟು ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್, ಹಿರಿಯಡ್ಕ ಪ. ಪೂ. ಕಾಲೇಜು ಪ್ರಾಂಶುಪಾಲ ಮಂಜುನಾಥ ಭಟ್, ಹಿರಿಯಡಕ ರೈತರ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ, ನಿರ್ದೇಶಕ ಸುಂದರ ಪೂಜಾರಿ, ಉಮೇಶ ಶೆಟ್ಟಿ, ಸಿದ್ಧಿವಿನಾಯಕ ಮೆಡಿಕಲ್ ಸ್ಟೋರ್ ಮಾಲಕ ಶಕ್ತಿ ಪ್ರಸಾದ್ ಶೆಣೈ, ಸಂಗೀತ ನಿರ್ದೇಶಕ ರಮೇಶ್ ಚಾಂತಾರು, ಸಂಗೀತ ಗುರು ಸ್ಮಿತಾ ಭಟ್ ಉಡುಪಿ, ಕಾಲೇಜಿನ ಉಪನ್ಯಾಸಕ ದಿನೇಶ್ ಎಮ್, ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕರಾದ ರವಿಚಂದ್ರ ಬಾಯರಿ ಸ್ವಾಗತಿಸಿ, ಪ್ರವೀಣ್ ಶೆಟ್ಟಿ ವಂದಿಸಿದರು. ಹೆಬ್ರಿ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು. ಶೆಟ್ಟಿ, ಟ್ರ್ಯಾಕ್ ಸಂಗೀತ ಕಾರ್ಯಕ್ರಮ ನಿರೂಪಕಿ ದೀಪಿಕಾ ಶೆಟ್ಟಿ ಸಹಕರಿಸಿದರು.