ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನ ಆಚರಣೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಉಡುಪಿಯ ಸೈಂಟ್ ಸಿಸಿಲಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ‘‘ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ’’ಯನ್ನು ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ. ಹೆಚ್. ಮಾತನಾಡಿ, ಪ್ರತೀ ವರ್ಷ ಸೆಪ್ಟೆಂಬರ್ 10 ರಂದು ವಿಶ್ವದಾಧ್ಯಾಂತ ‘‘ವಿಶ್ವ ಆತ್ಮಹತ್ಯೆ ತಡೆ ದಿನ’’ವನ್ನಾಗಿ ಆಚರಿಸಲಾಗುತ್ತದೆ.

ಮಾನಸಿಕ ಸಮಸ್ಯೆಗಳು, ಖಿನ್ನತೆ ಅಥವಾ ಆತ್ಮಹತ್ಯೆಯ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ತಪ್ಪಲ್ಲ ಎಂಬ ವಾತಾವರಣ ಸೃಷ್ಠಿಸುವುದು, ಆತ್ಮಹತ್ಯೆ ಅನಿವಾರ್ಯವಲ್ಲ, ಸಕಾಲಿಕ ವiತ್ತು ಮಾನಸಿಕ ನೆರವಿನಿಂದ ಜೀವಗಳನ್ನು ಉಳಿಸಬಹುದು ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಹಾಯ ಮೇರಿ ಮಾತನಾಡಿ, ಯಾರಾದರೂ ಮಾನಸಿಕ ಒತ್ತಡ, ನಿರಾಸೆ, ಸಂಕಷ್ಟದಲ್ಲಿರುವಾಗ ಅವರನ್ನು ನಿರ್ಲಕ್ಷಿಸದೇ ಅವರ ಮಾತನ್ನು ಆಲಿಸುವುದು ಬಹಳ ಮುಖ್ಯ. ಆಲಿಸೋಣ, ಅರ್ಥ ಮಾಡಿಕೊಳ್ಳೋಣ ಬೆಂಬಲಿಸೋಣ, ಜೀವ ರಕ್ಷಿಸೋಣ ಎಂದು ಮಾಹಿತಿಯನ್ನು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಶಶಾಂಕ್ ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿ, ಆತ್ಮಹತ್ಯೆಯ ಆಲೋಚನೆಗಳು ಒಬ್ಬ ವ್ಯಕ್ತಿಯಲ್ಲಿ ಏಕಾಏಕಿ ಹುಟ್ಟಿಕೊಳ್ಳುವುದಿಲ್ಲ. ಬಹುತೇಕ ಸಂಧರ್ಭದಲ್ಲಿ ಆ ವ್ಯಕ್ತಿಯ ನಡವಳಿಕೆ ಮತ್ತು ದೈನಂದಿನ ಅಭ್ಯಾಸಗಳಲ್ಲಿ ಸೂಕ್ಷö್ಮ ಮುನ್ಸೂಚನೆ ಕಂಡು ಬಂದರೆ ಇವುಗಳನ್ನು ಸಕಾಲದಲ್ಲಿ ಗುರುತಿಸಿ ಸ್ಪಂದಿಸುವುದರಿಂದ ಅಮೂಲ್ಯ ಜೀವವನ್ನು ಉಳಿಸಬಹುದು. ದೈಹಿಕ ಆರೋಗ್ಯದ ರಕ್ಷಣೆಯಷ್ಟೇ ಮಾನಸಿಕ ಆರೋಗ್ಯದ ರಕ್ಷಣೆ ಕೂಡ ಮುಖ್ಯ.

ಕೇಂದ್ರ ಸರ್ಕಾರದ ಉಚಿತ ಮತ್ತು 24*7 ಲಭ್ಯವಿರುವ ಟೆಲಿಮನಸ್ ಸಹಾಯವಾಣಿ ಸಂಖ್ಯೆ 14416 ಗೆ ಕರೆ ಮಾಡಲು ಅವರಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮೇಲ್ವೀಚಾರಣಾಧಿಕಾರಿ ಹೆಚ್.ನಾಯ್ಕ್ರ್, ಶುಶ್ರೂ಼ಷಾಧಿಕಾರಿ ದೀಕ್ಷಾ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಪ್ರವೀಣ, ಅಧ್ಯಾಪಕ ವೃಂದದವರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಉಪಸ್ಥಿತರಿದ್ದರು. ವಸಂತಿ ಸ್ವಾಗತಿಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಕ್ಲಿನಿಕಲ್ ಸೈಕಾಲಾಜಿಸ್ಟ್ ಜೆನ್ನಿಫರ್ ಕ್ಯಾಥರಿನ್ ವಂದಿಸಿದರು.