ಹೆಬ್ರಿ-ಪರ್ಕಳ ಹೆದ್ದಾರಿಗಾಗಿ ಸಾಂಪ್ರದಾಯಿಕ ಮರಗಳ ಹನನ: ಪರಿಸರ ಪ್ರೇಮಿಗಳಿಂದ ಆಕ್ಷೇಪಣೆ

ಉಡುಪಿ: ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪ್ರದೇಶದ ಜೀವ ವೈವಿಧ್ಯಕ್ಕೆ ಮಾರಕವಾಗುತ್ತಿರುವ ಅಭಿವೃದ್ದಿ ಕಾರ್ಯಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪಶ್ಚಿಮ ಘಟ್ಟಗಳ ಹಸುರು ನುಂಗಲು ಹೊರಟಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

ಹೆಬ್ರಿಯಿಂದ ಪರ್ಕಳದ ವರೆಗೆ ಚತುಷ್ಪಥ ಹೆದ್ದಾರಿಯ ಹೆಸರಿನಲ್ಲಿ ಸಾವಿರಾರು ಬಲಿತ ಪಾರಂಪರಿಕ ಮರಗಳನ್ನು ಕಡಿಯಲು ಮುಂದಾಗಿದೆ. ಮರ ಕಡಿತಲೆಗೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಮೀರಿ ತನ್ನ ಲಾಭದ ವ್ಯವಹಾರವನ್ನು ವಿಸ್ತರಿಸಲು ಹೆದ್ದಾರಿ ಪ್ರಾಧಿಕಾರಗಳು ಮುಂದಾಗಿದೆ. ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಹೊರತು ಪಡಿಸಿ ಉಳಿದ ಪ್ರದೇಶದಲ್ಲಿ ಎಗ್ಗಿಲ್ಲದೇ ಸಾಲು ಮರ ಕಡಿಯುವ ಕೆಲಸ ನಡೆಯುತ್ತಿದೆ. ನಂತರದಲ್ಲಿ ಸೋಮೇಶ್ವರ ಅಭಯಾರಣ್ಯದ ಒಳಗೂ ಲಕ್ಷಾಂತರ ಮರಗಳನ್ನು ಕಡಿಯಲು ನಡೆಸಿದ ಪೂರ್ವ ತಯಾರಿಯಿದು. ಡಿಸೆಂಬರ್ 22 ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಈ ಕುರಿತು ಅರಣ್ಯ ಇಲಾಖೆಗೆ ([email protected]) ಆಕ್ಷೇಪಣೆ ಕಳುಹಿಸಿ ಪಶ್ಚಿಮ ಘಟ್ಟಗಳನ್ನು ಉಳಿಸಲು ನೆರವಾಗಿ ಎಂದು ಪರಿಸರ ಪ್ರೇಮಿಗಳು ಕೇಳಿಕೊಂಡಿದ್ದಾರೆ.

ಈ ಕುರಿತು ಕುಂದಾಪುರ ಉಪವಿಭಾಗ ಅರಣ್ಯಾಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಕೆ

ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ(169ಎ) ಕಾಮಗಾರಿಗಾಗಿ ಹೆಬ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಳಪೇಟೆಯಿಂದ ಕೊಳಗುಡ್ಡೆಯವರೆಗೆ 862 ಮರಗಳನ್ನು ಹಾಗೂ ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕೊಳಗುಡ್ಡೆಯಿಂದ ಮುಳ್ಳುಗುಡ್ಡೆಯವರೆಗೆ 580 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ಕುರಿತು ಆಕ್ಷೇಪಣೆ ಸಲ್ಲಿಸಿದ್ದು, ಉದ್ದೇಶಿತ ರಾಷ್ಟ್ರೀಯ ಹೆದ್ದಾರಿಯು ಪಶ್ಚಿಮಘಟ್ಟಗಳ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತಿದ್ದು, ಪಾರಂಪಾರಿಕ ಮರಗಳನ್ನು ಕತ್ತರಿಸಿ ತೆಗೆಯುವುದರಿಂದ ಗುಡ್ಡ ಕುಸಿತವಾಗುವ ಸಂಭವವಿರುತ್ತದೆ. ಹಾಲಿ ಇರುವ ರಸ್ತೆಯ ಅಗಲವನ್ನು ದುರಸ್ತಿ ಮಾಡಿ, ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಸುಮಾರು 1500 ಮರಗಳನ್ನು ಕಡಿಯುವ ಪ್ರಮೇಯವೇ ಬರುವುದಿಲ್ಲ. ಅಲ್ಲದೆ, ಪಶ್ಚಿಮಘಟ್ಟಗಳು ಜಾಗತಿಕ ಮಹತ್ವ ಹೊಂದಿರುವುದು ಜೊತೆಗೆ ವಿಶ್ವಪಾರಂಪಾರಿಕ ತಾಣವೆಂದು ಘೋಷಿಸಲಾದ ಪ್ರದೇಶಗಳಲ್ಲಿ ಅನಗತ್ಯವಾಗಿ ಮರಗಳನ್ನು ಕಡಿಯುವುದು ಮಾನವೀಯತೆಗೆ ವಿರುದ್ದವಾಗುತ್ತದೆ.

ನೂರಾರು ವರ್ಷಗಳಿಂದ ಬಾಳಿ ಬದುಕುತ್ತಾ, ತನ್ನ ನೈಸರ್ಗಿಕ ಸೇವೆಯನ್ನು ಮಾನವ ಸಂತತಿಗೆ ನೀಡುತ್ತಿರುವ ಮರಗಳನ್ನು ರಸ್ತೆ ಅಗಲೀಕರಣದ ನೆಪದಲ್ಲಿ ಕಡಿಯುವುದು ಸಾಮಾಜಿಕ ನ್ಯಾಯವೂ ಆಗಿರುವುದಿಲ್ಲ. ಜೊತೆಗೆ ಈ 1500 ಚಿಲ್ಲರೆ ಮರಗಳಲ್ಲಿ ಅಸಂಖ್ಯವಾದ ಜೀವಿವೈವಿಧ್ಯ ಪ್ರಬೇಧಗಳು ಬಾಳಿ ಬದುಕುತ್ತಿದ್ದು, ಒಂದೊಮ್ಮೆ ತಾವುಗಳು ಮರಗಳ ಕಟಾವಿಗೆ ಅನುಮತಿ ನೀಡಿದಲ್ಲಿ, ಅಸಂಖ್ಯ ಜೀವಿ ವೈವಿಧ್ಯಗಳು ನೆಲೆಯಿಲ್ಲದೇ ಅನಾಥವಾಗುತ್ತವೆ. ಇದಕ್ಕೆ ಪರ್ಯಾಯ ಮಾರ್ಗಗಳನ್ನು ಏನಾದರೂ ಯೋಚಿಸಲಾಗಿದೆಯೇ?

ಪಶ್ಚಿಮಬಂಗಾಳದಲ್ಲಿ ರೈಲ್ವೇ ಓವರ್ ಬ್ರಿಡ್ಜ್ ನಿರ್ಮಿಸಲು 356 ಪಾರಂಪಾರಿಕ ಮರಗಳನ್ನು ತೆರವು ಮಾಡುವುದಿತ್ತು. ಅಲ್ಲಿನ ಸ್ವಯಂಸೇವಾ ಸಂಸ್ಥೆಯೊಂದು ಪಾರಂಪಾರಿಕ ಮರಗಳನ್ನು ಕಡಿಯಬಾರದು ಎಂದು ಸರ್ವೋಚ್ಚ ನ್ಯಾಯಾಯಲಯದ ಮೊರೆಹೋಯಿತು. 2021ರ ಫೆಬವರಿಯಲ್ಲಿ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ, 356 ಮರಗಳ ನೈಸರ್ಗಿಕ ಸೇವೆಯನ್ನು ಗುರುತಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಯಿತು. ಸುಮಾರು 6 ತಿಂಗಳ ಕಾಲ ಸಮಗ್ರ ಅಧ್ಯಯನ ನಡೆಸಿದ ಸಮಿತಿಯು, ಯಾವುದೇ ಅಭಿವೃದ್ಧಿ ಹಿನ್ನೆಲೆಯಲ್ಲೂ ಪಾರಂಪಾರಿಕ ಮರಗಳನ್ನು ಕಡಿಯುವುದು ಸೂಕ್ತವಲ್ಲ. ಅವುಗಳ ನೈಸರ್ಗಿಕ ಸೇವೆಯ ಮೊತ್ತ ರೂ.74,50000 ಮೌಲ್ಯವಾಗುತ್ತದೆ ಆದ್ದರಿಂದ ಯಾವುದೇ ಕಾರಣಕ್ಕೂ ಮರಗಳನ್ನು ಕಡಿಯುವುದು ಸೂಕ್ತವಾದ ನಿರ್ಧಾರವಾಗುವುದಿಲ್ಲವೆಂದು ವರದಿ ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.

ಒಂದೊಮ್ಮೆ ರಸ್ತೆ ಅಗಲೀಕರಣಕ್ಕಾಗಿ ಮರ ಕಡಿಯುವುದು ಅನಿವಾರ್ಯ ಎಂದು ಸಾಬೀತಾದಲ್ಲಿ ಒಂದು ಮರಕ್ಕೆ ರೂ.74,50000 ನಂತೆ 1500 ಮರಗಳಿಗೆ ರೂ.11,175,000,000 ಮೊತ್ತವನ್ನು ಉಪಯೋಗಿ ಸಂಸ್ಥೆಯಿಂದ ಭರಿಸಿಕೊಂಡು ಮರ ಕಡಿಯಲು ಅನುಮತಿ ನೀಡಬಹುದು ಹಾಗೂ ಭರಿಸಿಕೊಂಡ ಹಣವನ್ನು ಮರಗಳನ್ನು ಸ್ಥಳಾಂತರಿಸುವುದು ಮತ್ತೆ ಬೆಳೆಸುವುದು, ಪರ್ಯಾಯ ಕಾಡು ನಿರ್ಮಿಸುವ ಕೆಲಸಕ್ಕೆ ಬಳಸಿಕೊಳ್ಳಬೇಕು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಒಂದು ಲಾಭಕೋರ ಸಂಸ್ಥೆಯಂತೆ ವರ್ತಿಸುತ್ತಿದ್ದು, ಅದಕ್ಕೆ ಯಾವುದೇ ನೈಸರ್ಗಿಕ ಕಾಳಜಿ ಇರುವುದಿಲ್ಲ. ಉದಾಹರಣೆಯಾಗಿ, ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ನಾಗಪುರದ ಎನ್.ಎಚ್-7ರಲ್ಲಿ ಕಡಿದ 20500 ಬಲಿತ ಪಾರಂಪಾರಿಕ ಮರಗಳ ಬದಲಾಗಿ 1,11000 ಸಸಿಗಳನ್ನು ನೆಟ್ಟು ಬೆಳಸಬೇಕಿತ್ತು. ಆದರೆ ಫೆಬ್ರವರಿ 2022 ರಂದು ಸ್ಥಳ ಪರಿಶೀಲನೆ ಮಾಡಿದ ಸರ್ಕಾರೇತರ ಸಂಸ್ಥೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನೆಟ್ಟ 1,11000 ಗಿಡಗಳಲ್ಲಿ ಒಂದು ಗಿಡವೂ ಉಳಿದಿಲ್ಲವೆಂದು ಬಹಿರಂಗ ಪಡಿಸಿತು.

ಮುಂಬರುವ ಬೇಸಿಗೆಯಲ್ಲಿ ಭಾರತವನ್ನು ಬಿಸಿ ಸುನಾಮಿಯು ಬಾಧಿಸಲಿದ್ದು; ಭಾರತೀಯರ ಬದುಕುವ ಸಾಮರ್ಥ್ಯದ ಮಿತಿಯನ್ನೇ ಕುಂಠಿತಗೊಳಿಸಲಿದೆ. ಭಾರತದ ಬಡವರು, ನಿರ್ಲಕ್ಷಿತರು, ಮಧ್ಯಮ ವರ್ಗದವರು, ಮಹಿಳೆಯರು, ವೃದ್ಧರು, ಮಕ್ಕಳು ಬೇಸಿಗೆಯ ಬಿಸಿಗಾಳಿಯ ಹೊಡೆತಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಗಂಭೀರವಾಗಿ ಎಚ್ಚರಿಸಿದೆ.

ಸಂರಕ್ಷಿತ ಅರಣ್ಯ ಪ್ರದೇಶಗಳನ್ನು ಹೊರತು ಪಡಿಸಿ ಉಳಿದ ಪ್ರದೇಶದಲ್ಲಿ ಎಗ್ಗಿಲ್ಲದೇ ಸಾಲು ಮರ ಕಡಿಯುವ ಕೆಲಸ ನಡೆಯುತ್ತಿದೆ. ನಂತರದಲ್ಲಿ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಒಳಗೂ ಲಕ್ಷಾಂತರ ಮರಗಳನ್ನು ಕಡಿಯಲು ನಡೆಸಿದ ಪೂರ್ವ ತಯಾರಿ ಎಂದು ನಮಗೆ ಅನ್ನಿಸುತ್ತಿದೆ.

ಮೇಲಿನ ಎಲ್ಲಾ ಬಲಿಷ್ಠವಾದ ಸಕಾರಣಗಳನ್ನು ಪರಿಗಣಿಸಿ, ಯಾವುದೇ ಕಾರಣಕ್ಕೂ ವಿಷಯದಲ್ಲಿ ಕಾಣಿಸಿದ ಮರಗಳ ಕಡಿತಲೆ ಮಾಡಲು ಸುತಾರಾಂ ಅನುಮತಿ ನೀಡಬಾರದು ಎಂದು ಮತ್ತೊಮ್ಮೆ ಬಲವಾದ ಆಕ್ಷೇಪಣೆಯನ್ನು ಈ ಮೂಲಕ ಸಲ್ಲಿಸಲಾಗಿದೆ ಎಂದು ಪರಿಸರ ಪ್ರೇಮಿಗಳು ತಿಳಿಸಿದ್ದಾರೆ.