ಪೌಷ್ಠಿಕ ಆಹಾರ ಕಿಟ್ ವಿತರಣೆ ಹಾಗೂ ಕ್ಷಯ ರೋಗ ಮಾಹಿತಿ ಕಾರ್ಯಾಗಾರ

ಉಡುಪಿ: ದೇಶದಲ್ಲಿ ಒಟ್ಟು ಇಪ್ಪತ್ತೈದು ಲಕ್ಷ ತೊಂಬತ್ತು ಸಾವಿರ ಕ್ಷಯ ರೋಗಿಗಳು ಇದ್ದಾರೆ ಎನ್ನುವ ಮಾಹಿತಿ ಇದೆ. ಇದಕ್ಕೆ ಕಾರಣ ಪೌಷ್ಟಿಕ ಆಹಾರದ ಕೊರತೆ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹರಡುವಿಕೆ. ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ನೀಡುವುದರಿಂದ ಪೌಷ್ಠಿಕತೆಯ ಕೊರತೆಯನ್ನು ಹೋಗಲಾಡಿಸಿ ಕ್ಷಯ ರೋಗವನ್ನು ನೀಗಿಸಬಹುದು. ಪ್ರಧಾನಿ ನರೇಂದ್ರ ಮೋದಿಯವ ಕ್ಷಯ ಮುಕ್ತ ಭಾರತದ ಆಶಯಕ್ಕಾಗಿ ಜಿಲ್ಲೆಯನ್ನು ಕ್ಷಯ ಮುಕ್ತವನ್ನಾಗಿಸಲು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ, ಲಯನ್ಸ್ ಅಂಡ್ ಲಿಯೋ ಕ್ಲಬ್ ಪರ್ಕಳ , ಅಪ್ಪು ಅಭಿಮಾನಿಗಳ ಬಳಗ ಉಡುಪಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಮುಂದಾಗಿವೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 774 ಕ್ಷಯ ರೋಗಿಗಳು ಪತ್ತೆ ಆಗಿದ್ದಾರೆ. ಉಡುಪಿ ತಾಲೂಕಿನಲ್ಲಿ 48 ಮಂದಿ, ಬ್ರಹ್ಮಾವರದಲ್ಲಿ 36 ಮಂದಿ, ಕುಂದಾಪುರದಲ್ಲಿ 48 ಮಂದಿ, ಕಾಪುವಿನಲ್ಲಿ 26 ಮಂದಿ, ಬೈಂದೂರಿನಲ್ಲಿ 23 ಮಂದಿ, ಕಾರ್ಕಳದಲ್ಲಿ 63 ಮಂದಿ, ಹೆಬ್ರಿಯಲ್ಲಿ 6 ಮಂದಿ ಕ್ಷಯ ರೋಗಿಗಳಿದ್ದು, ಇವರೆಲ್ಲಾ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ ಅವರ ಮುತುವರ್ಜಿಯಲ್ಲಿ ಮೊಟ್ಟ ಮೊದಲನೆಯದಾಗಿ ಉಡುಪಿ ನಗರ ವ್ಯಾಪ್ತಿಯಲ್ಲಿರುವ ಆರ್ಥಿಕವಾಗಿ ಹಿಂದುಳಿದ ಕ್ಷಯ ರೋಗಿಗಳಿಗೆ ಆರು ತಿಂಗಳು ಪೌಷ್ಟಿಕ ಆಹಾರ ಕಿಟ್ ಅನ್ನು ನೀಡುವ ಯೋಜನೆಯನ್ನು ಹಲವಾರು ಸಂಘ ಸಂಸ್ಥೆಗಳ ಮೂಲಕ ಈಗಾಗಲೇ ಕೈಗೊಳ್ಳಲಾಗಿದೆ. ಉಡುಪಿ ಜಿಲ್ಲೆಯಲ್ಲಿರುವಂತಹ ಎಲ್ಲಾ ಕ್ಷಯ ರೋಗಿಗಳಿಗೆ ಪೌಷ್ಠಿಕ ಆಹಾರದ ಕಿಟ್ ನೀಡಲು ಸಂಘ ಸಂಸ್ಥೆಗಳ ಸಹಾಯದ ನಿರೀಕ್ಷೆಯಿದೆ. ತನ್ಮೂಲಕ ಕ್ಷಯ ಮುಕ್ತ ಭಾರತ, ಕ್ಷಯ ಮುಕ್ತ ಕರ್ನಾಟಕ ಹಾಗೂ ಕ್ಷಯ ಮುಕ್ತ ಉಡುಪಿ ಜಿಲ್ಲೆಯನ್ನಾಗಿಸಲು ಕೈಜೋಡಿಸಬೇಕಾಗಿ ಕೊಡವೂರು ವಾರ್ಡ್ ನಗರ ಸಭಾ ಸದಸ್ಯ ಕೆ ವಿಜಯ್ ಕೊಡವೂರು ಮನವಿ ಮಾಡಿದ್ದಾರೆ.