ಜ.4: ವಿಶ್ವಗುರು ಪೇಜಾವರ ಶ್ರೀಗಳಿಗೆ ಉಡುಪಿ ನಾಗರಿಕರ ಪ್ರಣಾಮಪೂರ್ವಕ ಶ್ರದ್ಧಾಂಜಲಿ

ಉಡುಪಿ: 8 ದಶಕಗಳ ಕಾಲ ಯತಿಶ್ರೇಷ್ಠರಾಗಿ ಯತಿಧರ್ಮಕ್ಕೆ ಹೊಸ ಭಾಷ್ಯ ಬರೆದು ವಿಶ್ವಗುರು ಎಂದು ಎಲ್ಲ ವರ್ಗದ ಜನರಿಂದ ಗೌರವಾದರಕ್ಕೆ ಭಾಜನರಾಗಿ ಡಿ. 29ರಂದು ಶ್ರೀಕೃಷ್ಣೈಖ್ಯರಾದ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವೇಶತೀರ್ಥರಿಗೆ ಪ್ರಣಾಮಪೂರ್ವಕ ಶ್ರದ್ಧಾಂಜಲಿ ಅರ್ಪಿಸಲು ಉಡುಪಿಯ ಸಮಸ್ತ ನಾಗರಿಕರು ಸಂಕಲ್ಪಿಸಿದ್ದು, ಜ. 4ರಂದು ಸಂಜೆ 6 ಗಂಟೆಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಸಭೆಯನ್ನು ಆಯೋಜಿಸಲಾಗಿದೆ.
ಪರ್ಯಾಯ ಶ್ರೀಪಲಿಮಾರು ಮಠಾಧೀಶರಾದ ಶ್ರೀಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ದಿವ್ಯಸಾನಿಧ್ಯದಲ್ಲಿ ಜರಗುವ ನುಡಿನಮನದಲ್ಲಿ ನಾಡಿನ ಎಲ್ಲ ವರ್ಗದ ಪ್ರಮುಖರು ಪಾಲ್ಗೊಳ್ಳಲಿರುವರು. ಪೇಜಾವರ ಶ್ರೀಗಳಿಂದ ನಾವೆಲ್ಲ ಉಪಕೃತರಾದವರು. ಈ ಹಿನ್ನೆಲೆಯಲ್ಲಿ ಉಡುಪಿಯ ಎಲ್ಲ ಸಂಘ-ಸಂಸ್ಥೆಗಳ ಸದಸ್ಯರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಉಡುಪಿ ಶಾಸಕರಾದ ಕೆ. ರಘುಪತಿ ಭಟ್  ತಿಳಿಸಿದ್ದಾರೆ.