ನವದೆಹಲಿ: ದೇಶಾದ್ಯಂತ ನವೆಂಬರ್ 21ರಿಂದ ಡಿಸೆಂಬರ್ 15ರವರೆಗೆ ಅಂದಾಜು 52 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ಈ ಮೂಲಕ ಸುಮಾರು ₹7.5 ಲಕ್ಷ ಕೋಟಿ ವಹಿವಾಟು ನಡೆಯಲಿದೆ ಎಂದು ಅಖಿಲ ಭಾರತ ವರ್ತಕರ ಒಕ್ಕೂಟ (CAIT) ತಿಳಿಸಿದೆ.
ಈ 25 ದಿನಗಳ ಮದುವೆ ಋತುವಿನಲ್ಲಿ ಪ್ರತಿದಿನ ಸರಾಸರಿ 2 ಲಕ್ಷಕ್ಕೂ ಅಧಿಕ ಮದುವೆಗಳು ನಡೆಯುವ ಅಂದಾಜಿದೆ. ಇದರಿಂದ ಚಿಲ್ಲರೆ ವ್ಯಾಪಾರ, ಉತ್ಪಾದನೆ, ಆತಿಥ್ಯ, ಸಾರಿಗೆ, ಆಹಾರ, ಆಭರಣ ಸೇರಿದಂತೆ ವಿವಿಧ ವಲಯಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ.
ದೆಹಲಿ-ಎನ್ಸಿಆರ್ ಪ್ರದೇಶವೊಂದರಲ್ಲೇ ಸುಮಾರು 5 ಲಕ್ಷ ಮದುವೆಗಳು ನಡೆಯುವ ನಿರೀಕ್ಷೆಯಿದ್ದು, ₹2.5 ಲಕ್ಷ ಕೋಟಿ ವಹಿವಾಟು ನಡೆಯುವ ಅಂದಾಜಿದೆ. ಒಟ್ಟು ವಹಿವಾಟಿನಲ್ಲಿ ಸರಕು ಮತ್ತು ಚಿಲ್ಲರೆ ಖರೀದಿಗೆ ₹4.05 ಲಕ್ಷ ಕೋಟಿ ಹಾಗೂ ವಿವಿಧ ಸೇವೆಗಳಿಗೆ ₹3.45 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಸಿಎಐಟಿ ತಿಳಿಸಿದೆ.
ದೇಶದ 25 ರಾಜ್ಯಗಳ 300ಕ್ಕೂ ಹೆಚ್ಚು ಪ್ರಮುಖ ವ್ಯಾಪಾರಿಗಳು ಹಾಗೂ 550 ವ್ಯಾಪಾರ ಸಂಘಗಳೊಂದಿಗೆ ಸಮಾಲೋಚನೆ ನಡೆಸಿ ಸಿಎಐಟಿಯ ಸಂಶೋಧನಾ ವಿಭಾಗ ಈ ಅಂದಾಜು ಸಿದ್ಧಪಡಿಸಿದೆ. ಮದುವೆ ಋತುವಿನಲ್ಲಿ ಕ್ಯಾಟರಿಂಗ್, ಅಲಂಕಾರ, ಫೋಟೋಗ್ರಫಿ, ಆತಿಥ್ಯ, ಸಾರಿಗೆ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸುಮಾರು 1.25 ಕೋಟಿ ತಾತ್ಕಾಲಿಕ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ಕಳೆದ ವರ್ಷಗಳ ಮದುವೆ ಮತ್ತು ವಹಿವಾಟಿನ ಅಂದಾಜು
| ವರ್ಷ | ಮದುವೆಗಳ ಸಂಖ್ಯೆ | ವಹಿವಾಟು |
|---|---|---|
| 2022 | 32 ಲಕ್ಷ | ₹3.7 ಲಕ್ಷ ಕೋಟಿ |
| 2023 | 38 ಲಕ್ಷ | ₹4.74 ಲಕ್ಷ ಕೋಟಿ |
| 2024 | 48 ಲಕ್ಷ | ₹5.90 ಲಕ್ಷ ಕೋಟಿ |
| 2025 | 46 ಲಕ್ಷ | ₹6.50 ಲಕ್ಷ ಕೋಟಿ |















