ಮೃತದೇಹದ ಮರಣೋತ್ತರ ಪರೀಕ್ಷೆಯ ನೂತನ ವಿಧಾನ ‘ವರ್ಟೊಪ್ಸಿ’: ಆಗ್ನೇಯ ಏಷ್ಯಾದಲ್ಲಿ ವರ್ಟೊಪ್ಸಿ ತಂತ್ರಜ್ಞಾನ ಬಳಸುವ ಏಕೈಕ ಆಸ್ಪತ್ರೆ ದೆಹಲಿ ಏಮ್ಸ್

ಶವಪರೀಕ್ಷೆ ಅಥವಾ ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಮ್) ಎನ್ನುವುದು ಅತ್ಯಂತ ವಿಶೇಷವಾದ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಇದು ವ್ಯಕ್ತಿಯ ಸಾವಿನ ಕಾರಣ ಮತ್ತು ವಿಧಾನವನ್ನು ನಿರ್ಧರಿಸುವ ಮತ್ತು ಯಾವುದೇ ರೋಗ ಅಥವಾ ಗಾಯವನ್ನು ಮೌಲ್ಯಮಾಪನ ಮಾಡುವ ಶವದ ಸಂಪೂರ್ಣ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕ ಶವ ಪರೀಕ್ಷೆಯಲ್ಲಿ ಶವದ ದೇಹವನ್ನು ಕತ್ತರಿಸಿ ಪರೀಕ್ಷೆ ನಡೆಸಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ಮೃತರ ಸಂಬಂಧಿಕರಿಗೆ ಈ ವಿಧಾನವು ಇರಿಸು ಮುರುಸನ್ನು ಉಂಟುಮಾಡುತ್ತದೆ. ಸಂಪ್ರದಾಯಗಳಲ್ಲಿ ಮರಣಾನಂತರ ಶವವನ್ನು ಕತ್ತರಿಸುವುದು ನಿಷಿದ್ದವಿದ್ದಲ್ಲಿ ಅಂತಹ ಕುಟುಂಬಿಕರು ವೇದನೆ ಅನುಭವಿಸಬೇಕಾಗುತ್ತದೆ. ಸಾಂಪ್ರದಾಯಿಕ ಶವಪರೀಕ್ಷೆಗೆ ಪರ್ಯಾಯವಾಗಿ ಹೊಸ ವಿಧಾನ ‘ವರ್ಟೋಪ್ಸಿ’ ಇಂತಹ ಪರಿವಾರಗಳಿಗೆ ಅನುಕೂಲಕರವಾಗಲಿದೆ.

ಏನಿದು ವರ್ಟೊಪ್ಸಿ ತಂತ್ರಜ್ಞಾನ?

ವರ್ಟೊಪ್ಸಿ ಎಂಬುದು ‘ವರ್ಚುವಲ್’ ಮತ್ತು ‘ಅಟೋಪ್ಸಿ’ ಅನ್ನುವ ಎರಡು ಪದಗಳನ್ನು ಸಂಯೋಜಿದ ಒಂದು ಪದವಾಗಿದೆ. ಶವಪರೀಕ್ಷೆಯ ಉದ್ದೇಶಕ್ಕಾಗಿ ಮತ್ತು ಸಾವಿನ ಕಾರಣವನ್ನು ಕಂಡುಹಿಡಿಯಲು ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ), ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂ.ಆರ್.ಐ) ನಂತಹ ಕ್ಲಿನಿಕಲ್ ಮೆಡಿಸಿನ್‌ನಲ್ಲಿ ಬಳಸಲಾಗುವ ಇಮೇಜಿಂಗ್ ವಿಧಾನಗಳನ್ನು ಇದು ಬಳಸಿಕೊಳ್ಳುತ್ತದೆ. ವರ್ಟೊಪ್ಸಿಯನ್ನು ಇಡೀ ದೇಹದ ವಿಶಾಲ ಮತ್ತು ವ್ಯವಸ್ಥಿತ ಪರೀಕ್ಷೆಯ ಪ್ರಮಾಣಿತ ಶವಪರೀಕ್ಷೆಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಬಹುದು ಏಕೆಂದರೆ ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಉತ್ತಮ ರೋಗನಿರ್ಣಯಕ್ಕೆ ಸಹಾಯ ಮಾಡುತ್ತದೆ ಮತ್ತು ಧಾರ್ಮಿಕ ಭಾವನೆಗಳಿಗೆ ಗೌರವವನ್ನು ನೀಡುತ್ತದೆ.

Union Health Minister told Rajya Sabha that it is likely to be possible  soon to carry out autopsies without dissecting the body. If this happens  then India will be the first country
Representational image

ಈ ವಿಧಾನವು ಮೃತ ದೇಹಗಳ ಪರೀಕ್ಷೆಗಾಗಿ ಸಿಟಿ, ಎಂ.ಆರ್.ಐ ಮತ್ತು ಮೂರು ಆಯಾಮದ (3ಡಿ) ಇಮೇಜಿಂಗ್‌ನಂತಹ ಇತ್ತೀಚಿನ ವಿಕಿರಣಶಾಸ್ತ್ರದ ತಂತ್ರಗಳನ್ನು ಬಳಸುತ್ತದೆ. ವರ್ಟೊಪ್ಸಿ ವೈದ್ಯಕೀಯ ಪ್ರಕರಣಗಳ ಕ್ಷೇತ್ರದಲ್ಲಿ ತ್ವರಿತವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ, ಆದರೆ ಇದು ತನ್ನದೇ ಆದ ಅನಾನುಕೂಲಗಳನ್ನೂ ಹೊಂದಿದೆ. ಮೃತ ದೇಹದೊಂದಿಗೆ ಯಾವುದೇ ನೇರ ಸಂಪರ್ಕವಿಲ್ಲದ ಕಾರಣ ವಾಸನೆ, ವಿನ್ಯಾಸ ಮತ್ತು ಬಣ್ಣಗಳಂತಹ ಅಂಗರಚನಾಶಾಸ್ತ್ರದ ಸಂಪರ್ಕವಿಲ್ಲದಿರುವುದರಿಂದ ಪರೀಕ್ಷಿಸುವ ರೋಗಶಾಸ್ತ್ರಜ್ಞರ ಶಾರೀರಿಕ ಇಂದ್ರಿಯಗಳನ್ನು ನಿರ್ಬಂಧಿಸಬೇಕಾಗುತ್ತದೆ ಎಂಬ ಅನಾನುಕೂಲತೆ ಇದೆ. ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಉನ್ನತ ತಂತ್ರಜ್ಞಾನದ ಇಮೇಜಿಂಗ್ ಸಾಧನಗಳನ್ನು ಬಳಸುವಲ್ಲಿನ ಕಾರ್ಯಸಾಧ್ಯತೆ ಮುಖ್ಯ ಅನನುಕೂಲತೆಯಾಗಿದೆ.

ಭಾರತದಲ್ಲಿ ವರ್ಟೊಪ್ಸಿ ತಂತ್ರಜ್ಞಾನ

ಭಾರತದಲ್ಲಿ ವರ್ಟೋಪ್ಸಿ ತಂತ್ರಜ್ಞಾನವನ್ನು 2020ನೇ ಇಸವಿಯಿಂದ ಬಳಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ಶವಪರೀಕ್ಷೆಗೆ 2.30 ಗಂಟೆ ತಗುಲಿದರೆ ವರ್ತೊಪ್ಸಿಗೆ 30 ನಿಮಿಷಗಳು ಸಾಕು. ಭಾರತದಲ್ಲಿ ಕೇವಲ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವರ್ಟೋಪ್ಸಿ ತಂತ್ರಜ್ಞಾನ ಲಭ್ಯವಿದೆ. ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಳೆದ ಎರಡು ವರ್ಷಗಳಿಂದ ವರ್ಟೊಪ್ಸಿ ತಂತ್ರಜ್ಞಾನವನ್ನು ಬಳಸುತ್ತಿರುವ ಏಕೈಕ ಆಸ್ಪತ್ರೆ ದೆಹಲಿ ಏಮ್ಸ್ ಆಗಿದೆ. ಇದಕ್ಕಾಗಿ ಏಮ್ಸ್ ಗೆ 5 ಕೋಟಿ ರೂಗಳ ಆರ್ಥಿಕ ಸಹಾಯ ನೀಡಲಾಗಿದೆ. ಮಂಗಳವಾರದಂದು ನಿಧನರಾದ ಹೆಸರಾಂತ ಹಾಸ್ಯ ಕಲಾವಿದ ರಾಜು ಶ್ರೀವಾಸ್ತವ ಅವರ ಮರಣೋತ್ತರ ಪರೀಕ್ಷೆಯನ್ನು ಇದೇ ವರ್ಟೊಪ್ಸಿ ತಂತ್ರಜ್ಞಾನದ ಮೂಲಕ ನಡೆಸಲಾಗಿದೆ ಎಂದು ದೆಹಲಿ ಏಮ್ಸ್ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ.

ಸ್ವಿಟ್ಜರ್ ಲ್ಯಾಂಡ್, ಅಮೇರಿಕಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಈಗಾಗಲೇ ಈ ತಂತ್ರಜ್ಞಾನವನ್ನು ಬಳಸುತ್ತಿದೆ.

ಕೃಪೆ: ನ್ಯಾಶನಲ್ ಲೈಬರಿ ಆಫ್ ಮೆಡಿಸಿನ್, ಟೈಮ್ಸ್ ಆಫ್ ಇಂಡಿಯಾ