ಉಡುಪಿ: ಸಿಂಡಿಕೇಟ್ ಬ್ಯಾಂಕ್‌ನ್ನು ಇನ್ನೊಂದು ರಾಷ್ಟ್ರೀಕೃತ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸುವ ಕೇಂದ್ರ ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ವಿರೋಧಿಸಿ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ನ. 30ರಂದು ಮಣಿಪಾಲದ ಸಿಂಡಿಕೇಟ್ ಹೌಸ್‌ನಲ್ಲಿ ಪ್ರತಿಭಟನಾ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಇದರ ಮೂಲಕ ಗ್ರಾಹಕರಿಗೆ ಸಿಂಡಿಕೇಟ್ ಬ್ಯಾಂಕ್ ಉಳಿಸಿ ಆಂದೋಲನದ ಜಾಗೃತಿ ಮೂಡಿಸಲು ಉದ್ದೇಶಿಸಿದೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಯು. ಶಶಿಧರ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೇಂದ್ರ ಸರ್ಕಾರ ಕೈಗೊಂಡಿರುವ ಅಸಹನೀಯ ಮತ್ತು ಅನಗತ್ಯ ಕ್ರಮದ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ. ಈ ನೆಲದ ಇತಿಹಾಸ ಹಾಗೂ ಸಿಂಡಿಕೇಟ್ ಬ್ಯಾಂಕ್‌ನೊಂದಿಗೆ ಉಡುಪಿಯ ಜನತೆಗಿರುವ ಅವಿನಾಭಾವ ಸಂಬಂಧ ಉಳಿಯಬೇಕು. ಈ ಜವಾಬ್ದಾರಿಯನ್ನು ಜನರಿಗೆ ನೆನಪಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದರು.
ಈವರೆಗೆ ನಡೆದಿರುವ ಬ್ಯಾಂಕ್ ವಿಲೀನ ಪ್ರಕ್ರಿಯೆಯಿಂದ ಬ್ಯಾಂಕ್‌ಗಳ ಆಡಳಿತ ಸಮಸ್ಯೆಗಳು ಬಗೆಹರಿದಿಲ್ಲ. ಯಾವುದೇ ಸುಧಾರಣೆಯೂ ಆಗಿಲ್ಲ. ಬದಲಾಗಿ ಬ್ಯಾಂಕ್‌ನ ಒಟ್ಟು ವ್ಯವಹಾರದಲ್ಲಿ ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡ ಹಾಗೂ ವಿಜಯ ಬ್ಯಾಂಕ್ ವಿಲೀನದಿಂದ ಷೇರುದಾರರು ಹೂಡಿಕೆಯ ಶೇ. 25ರಷ್ಟು ಹಣವನ್ನು ಕಳೆದುಕೊಂಡಿದ್ದಾರೆ.
ಮೂರನೇ ಹಂತದ ವಿಲೀನ ಪ್ರಕ್ರಿಯೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಬ್ಯಾಂಕ್‌ಗಳು ಅಸ್ಥಿತ್ವ ಕಳೆದುಕೊಳ್ಳುವ ಭೀತಿಯಲ್ಲಿವೆ ಎಂದು ಹೇಳಿದರು.
ಒಕ್ಕೂಟದ ಶಂಕರ್ ಕುಂದಾಪುರ, ಸೂರಜ್ ಉಪ್ಪುರ್, ಮಾರಿಯೋ ಮಥಾಯಿಸ್, ಎಚ್. ಸುಜನ್, ನರಸಿಂಹ ಮೂರ್ತಿ ಉಪಸ್ಥಿತರಿದ್ದರು.