ನ. 24: ಯಕ್ಷೋತ್ಸಾಹಿ ಅಧ್ಯಯನ ‌ಕೇಂದ್ರದ ವಾರ್ಷಿಕೋತ್ಸವ-ಪ್ರಶಸ್ತಿ ಪ್ರದಾನ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನ. 24ರಂದು ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಶ್ರೀನಿದಿ ಆಚಾರ್ಯ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 7ಗಂಟೆಗೆ ಬಡಗುತಿಟ್ಟು ಶೈಲಿಯ ‘ವಿದ್ಯುನ್ಮತಿ ಪರಿಣಯ’ ಯಕ್ಷಗಾನ ಪ್ರಸಂಗ ಪ್ರದರ್ಶಗೊಳ್ಳಲಿದೆ. ಬಳಿಕ ಸಂಜೆ ೮.೪೫ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಕಿರಿಯ ವಿದ್ಯಾರಾಜೇಶ್ವರ ಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು ಎಂದು ತಿಳಿಸಿದರು.
ಮಣಿಪಾಲ ಮಾಹೆಯ ಗಾಂಧಿ ಅಧ್ಯಯನ ಕೇಂದ್ರ ಮತ್ತು ಯಕ್ಷಗಾನ ಕೇಂದ್ರದ ನಿರ್ದೇಶಕ ವರದೇಶ್‌ ಹೀರೆಗಂಗೆ ಅಧ್ಯಕ್ಷತೆ ವಹಿಸುವರು. ರಂಗ ನಿರ್ದೇಶಕ ಎಚ್‌ಪಿ. ರವಿರಾಜ್‌ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭದಲ್ಲಿ ಮಂಗಳೂರಿನ ಕೀರ್ತನ್‌ ಅವರಿಗೆ ‘ಯಕ್ಷೋತ್ಸಾಹಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ದಿ. ವಾಸುದೇವ ಪೈ ಸ್ಮರಣಾರ್ಥ ಛಾಯಾಚಿತ್ರ ಸ್ಪರ್ಧೆ ಹಾಗೂ ‘ಸುಮ ಸಲ್ಲಾಪ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಜರುಗಲಿದೆ ಎಂದರು.
ಗೋಷ್ಠಿಯಲ್ಲಿ ಉಡುಪಿ ಯಕ್ಷೋತ್ಸಾಹಿ ಯಕ್ಷಗಾನ ಅಧ್ಯಯನ ಕೇಂದ್ರದ ಅಧ್ಯಕ್ಷೆ ಸುಮಿತ್ರಾ ಕೆರೆಮಠ, ಕೋಶಾಧಿಕಾರಿ ಕಾರ್ತಿಕ್‌ ಪ್ರಭು ಉಪಸ್ಥಿತರಿದ್ದರು.