ನ.1: ದಿ‌ ವರ್ಲ್ಡ್ ಸಂಡೇ ಸ್ಕೂಲ್ ಡೇ ಮಕ್ಕಳ ಹಬ್ಬ

ಉಡುಪಿ: ಸಿಎಸ್‌ಐ ಉಡುಪಿ ವಲಯ ಹಾಗೂ ಬೈಲೂರು ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್‌ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಹಬ್ಬ ‘ದಿ ವರ್ಲ್ಡ್‌ ಸಂಡೇ ಸ್ಕೂಲ್‌ ಡೇ’ ಬೈಲೂರಿನ ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ನವೆಂಬರ್‌ 1ರಂದು ನಡೆಯಲಿದೆ ಎಂದು ಸಿಎಸ್‌ಐ ಉಡುಪಿ ವಲಯ ಅಧ್ಯಕ್ಷ ಇಯಾನ್‌ ಡಿ. ಸೋನ್ಸ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಬೆಳಿಗ್ಗೆ 9.15ಕ್ಕೆ ಸಿಎಸ್‌ಐ ಕರ್ನಾಟಕದ ಬಿಷಪ್‌ ಮೋಹನ್‌ ಮನೋರಾಜ್‌ ಸಂದೇಶ ನೀಡುವ ಮೂಲಕ ಕಾರ್ಯಕ್ರಮಕ್ಕೆ
ಚಾಲನೆ ನೀಡುವರು. ಇದಕ್ಕೂ ಮೊದಲು ಮುದ್ದಣ ಎಸ್ಟೇಟ್‌ನಿಂದ ಚರ್ಚ್‌ವರೆಗೆ ಮೆರವಣಿಗೆ ನಡೆಯಲಿದೆ. ಬೈಲೂರು ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಟ್ರಸ್ಟಿ ರಮೇಶ್‌ ಶೆಟ್ಟಿ ಬೆಳಿಗ್ಗೆ 9ಗಂಟೆಗೆ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸುವರು ಎಂದರು.
ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಉಡುಪಿ ಧರ್ಮಪ್ರಾಂತದ ಬಿಷಪ್‌ ಜೆರಾಲ್ಡ್‌ ಐಸಾಕ್‌ ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು. ಗೋಷ್ಠಿಯಲ್ಲಿ ಚರ್ಚ್‌ನ ಉಪಾಧ್ಯಕ್ಷ ಅಕ್ಷಯ ಅಮಣ್ಣ, ಉಡುಪಿ ವಲಯ ಕಾರ್ಯದರ್ಶಿ ನವೀನ್‌ ಎಂ. ಪಾಲನ್‌, ಡೋನಾಲ್ಡ್‌ ಅಂಚನ್‌, ಸ್ಟ್ಯಾನಿ ಕೋಟ್ಯಾನ್‌ ಉಪಸ್ಥಿತರಿದ್ದರು.