ಕುತಂತ್ರ, ಬೆದರಿಕೆಗಳಿಗೆ ಹೆದರುವ ಮಗನೇ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: “ರಾಜಕೀಯ ಕುತಂತ್ರಕ್ಕೆ ಈ ಡಿ.ಕೆ. ಶಿವಕುಮಾರ್ ಹೆದರುವ ಮಗನೇ ಅಲ್ಲ. ಯಾವುದೇ ಒತ್ತಡಕ್ಕೆ ಹೆದರುವ ಮಗ ಅಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುಡುಗಿದ್ದಾರೆ.

ಬೆಂಗಳೂರಿನ ಸದಾಶಿವನಗರದ ಮನೆಯಲ್ಲಿ ಇಂದು ಸಿಬಿಐ ತನಿಖೆ ಅಂತ್ಯಗೊಂಡ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. 2017ರಲ್ಲಿ ಗುಜರಾತ್ ಚುನಾವಣೆ ವೇಳೆ ಐಟಿ ಪ್ರಕರಣ ದಾಖಲಿಸಿತು. 2019ರಲ್ಲಿ ಇಡಿ ಕೇಸ್ ಹಾಕಿ ಜೈಲಿಗೆ ಕಳುಹಿಸಿದರು. ಇದೀಗ 2020ರಲ್ಲಿ ಮತ್ತೆ ಸಿಬಿಐ ದಾಳಿ ಮಾಡಿದೆ. ಇದು ಮುಗಿಯಲ್ಲ, ಚುನಾವಣೆ ಆಗುವವರೆಗೂ ಹೀಗೆ ಕಾಟ ಇರುತ್ತದೆ ಎಂದು ವಾಗ್ದಾಳಿ ನಡೆಸಿದರು.

ಇದು ಸಿಬಿಐ ಕೇಸ್ ಅಲ್ಲ. ಆರ್ಥಿಕ ಅಪರಾಧ ಪ್ರಕರಣ ಎಂದು ಎಜಿ ಹೇಳಿದರೂ, ಆದರೆ ಪಾಪ ರಾಜ್ಯದ ಸಿಎಂ ಕೇಳದೆ ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ. ನನ್ನ ಬಾಯಿ ಮುಚ್ಚಿಸಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಇವರ ಬೆದರಿಕೆಗಳಿಗೆ ನಾನು ಹೆದರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷಕ್ಕೆ, ಕಾರ್ಯಕರ್ತರಿಗೆ ಕಳಂಕ ತರುವ ಕೆಲಸ ಡಿಕೆ ಕುಟುಂಬ ಮಾಡಲ್ಲ. ನಿಮ್ಮ ಅಭಿಮಾನ, ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಮನೆ ಮುಂದೆ ಹಾಗೂ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.