ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಕ್ಷೇತ್ರ ತೊರೆಯಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಏಪ್ರಿಲ್ 26 ರಂದು
ಚುನಾವಣೆ ನಡೆಯಲಿದ್ದು, ಸ್ಥಳೀಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರರು, ಕಾರ್ಯಕರ್ತರು, ಸ್ಟಾರ್ ಕ್ಯಾಂಪೇನರ್ಸ್ಗಳು, ಮೆರವಣಿಗೆ ಅಯೋಜಕರು ಸೇರಿದಂತೆ ಮತ್ತಿತರರು ಏಪ್ರಿಲ್ 24 ರಂದು ಸಂಜೆ 6 ಗಂಟೆಗೆ ಕ್ಷೇತ್ರ ಬಿಡಬೇಕೆಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆ ಹಾಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಮತದಾನವು ಏಪ್ರಿಲ್ 26 ರಂದು ನಡೆಯಲಿದ್ದು, ಚುನಾವಣೆಯು ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಬೇಕಾದ ಹಿನ್ನಲೆ, ಮತದಾನದ ಅಂತ್ಯದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರಗಳನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಧ್ವನಿವರ್ಧಕಗಳ ಬಳಕೆ ಮಾಡಲು ಅವಕಾಶವಿಲ್ಲ. ಮನೆಮನೆಗೆ ಭೇಟಿ ಪ್ರಚಾರಕ್ಕೆ ಅನುಮತಿ ಇರುತ್ತದೆ ಎಂದರು.

ಮತದಾನಕ್ಕೆ ನಿಗಧಿಪಡಿಸಿದ ಅವಧಿ ಕೊನೆಗೊಳ್ಳುವುದಕ್ಕಿಂತ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಹಾಗೂ ವಿದ್ಯುನ್ಮಾನ ಮಾದ್ಯಮಗಳಲ್ಲಿ ಜಾಹೀರಾತು ಪ್ರಕಟಸಬೇಕಾದರೆ ಸಂಬಂಧಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷವು ಮಾಧ್ಯಮ ಪ್ರಾಮಾಣೀಕರಣ ಸಮಿತಿ ವತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಯಾವುದೇ ಚುನಾವಣೋತ್ತರ ಸಮೀಕ್ಷೆ ಹಾಗೂ ಸಮೀಕ್ಷಾ
ಫಲಿತಾಂಶವನ್ನು ಪ್ರಚಾರಪಡಿಸಲು ಅವಕಾಶವಿರುವುದಿಲ್ಲ ಎಂದರು.

ಮತದಾನದ ಕೊನೆಯ 48 ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನಗಳು ಮಾತ್ರ ಬಳಕೆಗೆ ಅವಕಾಶವಿರುತ್ತದೆ. ಒಂದು ಅಭ್ಯರ್ಥಿಗೆ ಇನ್ನೊಂದು ಚುನಾವಣೆ ಏಜೆಂಟ ಹಾಗೂ ಒಂದು ಪ್ರಚಾರಕ್ಕೆ ಅವಕಾಶವಿದೆ. ಅಭ್ಯರ್ಥಿಯ ಅನುಪಸ್ಥಿಯಲ್ಲಿ ಅಭ್ಯರ್ಥಿಗೆ ನೀಡಿದ ವಾಹನವನ್ನು ಇತರರು ಉಪಯೋಗಿಸತಕ್ಕದ್ದಲ್ಲ ಎಂದ ಅವರು, ಅನುಮತಿಸಿದ ವಾಹನಗಳಲ್ಲಿ 5 ಜನಕ್ಕಿಂತ ಹೆಚ್ಚು ಜನರು
ಪ್ರಯಾಣಿಸತಕ್ಕದ್ದಲ್ಲ. ಈ ಅವಧಿಯಲ್ಲಿ 5 ಜನಕ್ಕಿಂತ ಹೆಚ್ಚಿನ ಜನ ಸೇರದಂತೆ ಸಿ.ಆರ್.ಪಿ.ಸಿ ಕಲಂ 144 ರಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದರು.

ಮತಗಟ್ಟೆಯ 100 ಮೀ. ಅಂತರದೊಳಗೆ ಮೊಬೈಲ್ ಬಳಕೆ ನಿಷೇಧವಿದೆ ಹಾಗೂ ಎಲ್ಲಾ ರೀತಿಯ ಪ್ರಚಾರ ನಿರ್ಬಂಧಿಸಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳ ಟೆಂಟ್‌ಗಳನ್ನು ತೆರೆಯುವಂತಿಲ್ಲ. 200 ಮೀ. ನಿಂದ ಹೊರಗೆ ತೆರೆಯಲು ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಟೆಂಟ್‌ನಲ್ಲಿ ಕೇವಲ ಇಬ್ಬರು ಕಾರ್ಯರ್ತರಿಗೆ ಸಾಕಾಗುವಷ್ಟು ಟಾರ್ಪಲಿನ್ ಅಥವಾ ಛತ್ರಿ ಮೇಲ್ಛಾವಣಿ ಹೊಂದಬಹುದಾಗಿದೆ. ಎರಡು ಕುರ್ಚಿ ಮತ್ತು ಮೇಜು ಹೊಂದಲು ಅವಕಾಶವಿದೆ ಎಂದರು.

ಪ್ರತೀ ಮತಗಟ್ಟೆಗೆ ಒಬ್ಬ ಪೋಲಿಂಗ್ ಏಜೆಂಟ್ ಅನ್ನು ಹಾಗೂ ಇಬ್ಬರು ರಿಲೀಫ್ ಏಜೆಂಟ್ ಅನ್ನು ನೇಮಕ ಮಾಡಲು ಅವಕಾಶವಿರುತ್ತದೆ. ಅವರುಗಳು ಮತಗಟ್ಟೆಯಲ್ಲಿ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲಿಯೇ ಆಸೀನರಾಗತಕ್ಕದ್ದು ಎಂದ ಅವರು, ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ ಕಲಂ 128 ರಲ್ಲಿ ನಿರ್ಧಿಷ್ಟಪಡಿಸಿದಂತೆ ಮತದಾನದ ಗೌಪ್ಯತೆಯನ್ನು ಕಾಪಾಡತಕ್ಕದ್ದು ಎಂದರು.

ಏ. 24 ರಂದು ಸಂಜೆ 5 ಗಂಟೆಯಿAದ ಏಪ್ರಿಲ್ 26 ರ ಮಧ್ಯರಾತ್ರಿ 12 ರ ವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜನ್ನು ನಿಷೇಧಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ತಹಶೀಲ್ದಾರ್ ಗುರುರಾಜ್, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

18 ವರ್ಷ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು ಮತದಾನ ಮಾಡುವುದು ಸಂವಿಧಾನ ಬದ್ಧ ಹಕ್ಕು ಆಗಿದ್ದು, ಈ ಸಂದರ್ಭದಲ್ಲಿ ಬಲಾಢ್ಯ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲ ವಿದ್ಯಾರ್ಥಿಗಳು ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಚುನಾವಣಾ ಆಯೋಗವು ಏ. 26 ರಂದು ರಜೆ ಘೋಷಿಸಿರುತ್ತದೆ.

ಆದ್ದರಿಂದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ತರಬೇತಿ ನಡೆಸುತ್ತಿರುವ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳನ್ನು ಮತದಾನ ದಿನದಂದು ಬಂದ್ ಮಾಡಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಮತ ಚಲಾಯಿಸಲು ಅವಕಾಶ ಕಲ್ಪಿಸುವಂತೆ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.