ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ, ಉಳಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ರದ್ದು

ಬೆಂಗಳೂರು: ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇದೆಯೇ ಇಲ್ಲವೇ ಎನ್ನುವ ಪ್ರಶ್ನೆಗೆ ಕೊನೆಗೂ ತೆರೆ ಬಿದ್ದಿದ್ದು ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲ ಪದವಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸರಕಾರ ತೀರ್ಮಾನಿಸಲಾಗಿದೆ.  ಉನ್ನತ ಶಿಕ್ಷಣ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ  ಶುಕ್ರವಾರ  ಈ ಕುರಿತು ಮಾಹಿತಿ ನೀಡಿದರು.

‘2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಧ್ಯಂತರ ಸೆಮಿಸ್ಟರ್  ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆ ಇಲ್ಲದೆಯೇ ಮುಂದಿನ ಹಂತಕ್ಕೆ ಉತ್ತೀರ್ಣಗೊಳಿಸಲಾಗುತ್ತದೆ.ಅಂತಿಮ ಸೆಮಿಸ್ಟರ್ ಅಥವಾ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ಒಳಗೆ ಪರೀಕ್ಷೆ ಮಾಡಲಾಗುವುದು, ಎಂಜಿನಿಯರಿಂಗ್ 1, 2, 3 ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲ. ಪದವಿ 1, 2 ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ.  ಡಿಪ್ಲೋಮಾ 1, 2, ವರ್ಷದ ವಿದ್ಯಾರ್ಥಿಗಳಿಗೂ ಪರೀಕ್ಷೆ ಇಲ್ಲ. ಮೊದಲ ವರ್ಷದ ಸ್ನಾತಕೋತ್ತರ ಪದವಿ ಪರೀಕ್ಷೆ ಇಲ್ಲ. ಅಂತಿಮ ವರ್ಷದ ಪರೀಕ್ಷೆ ಬಿಟ್ಟು ಯಾರಿಗೂ ಪರೀಕ್ಷೆ ಇಲ್ಲ ಎಂದು ಮಾಹಿತಿ ನೀಡಿದರು.

ಒಂದು ವೇಳೆ  ಸೆಪ್ಟೆಂಬರ್ ನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ. ಹೊಸ ಅಭ್ಯರ್ಥಿಗಳಾಗಿ ಬರೆಯಬಹುದು. ಇಂಟರ್ನಲ್ ಅಸೆಸ್ಮೆಂಟ್, ಹಿಂದಿನ ವರ್ಷದ ಪರೀಕ್ಷೆಯಲ್ಲಿ ಅಂಕಗಳಿಕೆ ಆಧಾರದಲ್ಲಿ ಪಾಸ್ ಮಾಡುತ್ತೇವೆ. ಇಂಟರ್ನಲ್ ಅಸೆಸ್ಮೆಂಟ್ ಶೇ.50 ಹಿಂದಿನ ಪರೀಕ್ಷೆ ಶೇ.50 ಆಧಾರದಲ್ಲಿ ಪಾಸ್ ಮಾಡಲಾಗುತ್ತದೆ. ಪರೀಕ್ಷೆಗಳು ಕೂಡ ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಮಾಡಲಿದ್ದೇವೆ ಎಂದರು.

ಹೊಸ ಶೈಕ್ಷಣಿಕ ವರ್ಷ:

ಈ ಶೈಕ್ಷಣಿಕ ವರ್ಷ 2020-21ರ ಶೈಕ್ಷಣಿಕ ಸಾಲಿನ ಮೊದಲ ಸೆಮಿಸ್ಟರ್ ಗೆ ಸೆಪ್ಟೆಂಬರ್ 1 ರಿಂದಲೇ ಆನ್‍ಲೈನ್ ತರಗತಿಗಳು ಹಾಗೂ ಅಕ್ಟೋಬರ್ 1 ರಿಂದ ಆಫ್‍ಲೈನ್ ತರಗತಿಗಳು ಆರಂಭವಾಗುತ್ತವೆ ಎಂದರು. ಸಿಇಟಿ ಪರೀಕ್ಷೆ ಜುಲೈ 30, 31ಕ್ಕೆ ನಡೆಯುತ್ತದೆ ಎಂಧವರು ತಿಳಿಸಿದ್ದಾರೆ