ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಶಿರಾಡಿ ಘಾಟ್ನಲ್ಲಿ ಸುರಂಗಗಳನ್ನು ನಿರ್ಮಿಸುವ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ ಮತ್ತು ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-75 ಸಿ ರಸ್ತೆಯಲ್ಲಿ ವಾಹನಗಳ ಸಾಂದ್ರತೆಯನ್ನು ಪರಿಹರಿಸಲು ಚತುಷ್ಪಥ ರಸ್ತೆಯನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಶುಕ್ರವಾರದಂದು ಲೋಕಸಭೆಯಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸುರಂಗ ಮಾರ್ಗದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಾರಿಗೆ ಸಚಿವ, ಶಿರಾಡಿ ಘಾಟ್ ವಿಭಾಗದಲ್ಲಿ ಸುರಂಗಗಳ ನಿರ್ಮಾಣವು ಬೃಹತ್ ಹೂಡಿಕೆಗಳನ್ನು ಜೊತೆಗೆ ಕೆಲಸ ಕಾರ್ಯಗತಗೊಳಿಸುವಲ್ಲಿನ ತೊಂದರೆಗಳನ್ನು ಒಳಗೊಂಡಿರುತ್ತದೆ ಮತ್ತು ಇದು ಕಾರ್ಯಸಾಧುವಲ್ಲ ಎಂದು ಹೇಳಿದ್ದಾರೆ.
ವಾಹನಗಳ ಸಾಂದ್ರತೆ ಮತ್ತು ಟ್ರಾಫಿಕ್ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ತಿಳಿದಿದೆ. ದ್ವಿಪಥ ಹೆದ್ದಾರಿಯನ್ನು ಚತುಷ್ಪಥವಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ಶಿರಾಡಿ ಘಾಟ್ ಚತುಷ್ಪಥ ರಸ್ತೆ ನಿರ್ಮಾಣಕ್ಕೆ 1200 ಕೋಟಿ ರೂ. ವೆಚ್ಚ ವಾಗಲಿದ್ದು, ಶೀಘ್ರದಲ್ಲಿ ಹೆದ್ದಾರಿ ನಿರ್ಮಾಣ ತಜ್ಞರು ಶಿರಾಡಿ ಘಾಟ್ಗೆ ಭೇಟಿ ನೀಡಿ ರಸ್ತೆ ನಿರ್ಮಾಣ ಬಗ್ಗೆ ಸರ್ವೆ ನಡೆಸಲಿದ್ದಾರೆ. ಇಲ್ಲಿನ ಸ್ಥಿತಿಗತಿ ಮತ್ತು ರಸ್ತೆ ಅಗಲೀಕರಣದಿಂದಾಗುವ ವೃಕ್ಷ ಹನನದ ಬಗ್ಗೆ ತಜ್ಞರು ವರದಿ ನೀಡಿದ ನಂತರ ಕಾಮಗಾರಿ ಆರಂಭವಾಗಲಿದೆ ಎನ್ನಲಾಗಿದೆ.