ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ; ಕೃಷಿ ಸಚಿವ

ಬೆಂಗಳೂರು: ಈ ವರ್ಷ ಮುಂಗಾರು ನಿಗದಿತ ಅವಧಿಗಿಂತ ಮುಂಚಿತವಾಗಿ ಆರಂಭವಾದ ಕಾರಣ ಮತ್ತು ಮುಸಕಿನ ಜೋಳ ಪ್ರದೇಶ 2 ಲಕ್ಷ ಹೆಕ್ಟೇರ್‌ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲ ರೈತರು ಆತಂಕದಿಂದ ಆಗಸ್ಟ್‌-ಸೆಪ್ಟೆಂಬರ್‌ಗೆ ಅಗತ್ಯವಿರುವ ಗೊಬ್ಬರವನ್ನು ಈಗಲೇ ಖರೀದಿಸಲು ಮುಂದಾಗಿದ್ದು, ಸಹ ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿರಬಹುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ರೈತರಿಗೆ ಆತಂಕ ಬೇಡ:
ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೂ, ಬೇಡಿಕೆ ಕಡಿಮೆಯಿರುವ ಜಿಲ್ಲೆಗಳಿಂದ ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಗೊಬ್ಬರ ವರ್ಗಾವಣೆ ಮಾಡಿ ಸರಿದೂಗಿಸಲಾಗುತ್ತಿದೆ. ಹೀಗಾಗಿ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು. ರಾಜ್ಯದಲ್ಲಿ 3.46 ಲಕ್ಷ ಮೆಟ್ರಿಕ್‌ ಟನ್‌ ಹಳೇ ಯೂರಿಯಾ ದಾಸ್ತಾನು ಉಳಿಕೆಯಿದ್ದು, ಕೇಂದ್ರದಿಂದ ಈ ಬಾರಿಗೆ 8.73 ಲಕ್ಷ ಮೆಟ್ರಿಕ್‌ ಟನ್‌ ಸರಬರಾಜಾಗಿದೆ.

ಅದರಲ್ಲಿ ಈಗಾಗಲೇ 7.08 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾವನ್ನು ವಿವಿಧ ಜಿಲ್ಲೆಗಳಿಗೆ ವಿತರಿಸಿದ್ದು, ರೈತರಿಗೆ ಮಾರಾಟ ಮಾಡಲಾಗಿದೆ. ಇನ್ನು 1.64 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ದಾಸ್ತಾನು ಉಳಿಕೆಯಿದೆ. ಅದರೊಂದಿಗೆ ರಸಗೊಬ್ಬರ ವಿಚಾರದಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನಿಗಾವಹಿಸಲು ಇಲಾಖೆಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಕೇಂದ್ರದಿಂದ 6.82 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಹಂಚಿಕೆ:
ಜುಲೈ ತಿಂಗಳವರೆಗೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5.34 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರ (ಎಲ್ಲ ವಿಧದ) ಹಂಚಿಕೆಯಾಗಿದೆ. ಅದರಲ್ಲಿ ಈವರೆಗೆ 4.30 ಲಕ್ಷ ಮೆಟ್ರಿಕ್‌ ಟನ್‌ ಸರಬರಾಜಾಗಿದೆ. ಉಳಿದಂತೆ ಏಪ್ರಿಲ್‌ನಿಂದ ಜುಲೈವರೆಗೆ ರಾಜ್ಯದಲ್ಲಿ 6.80 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಬೇಡಿಕೆಯಿದ್ದು, ಕೇಂದ್ರ ಸರ್ಕಾರದಿಂದ 6.82 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಹಂಚಿಕೆಯಾಗಿದೆ. ಅದರಲ್ಲಿ 5.26 ಮೆಟ್ರಿಕ್‌ ಟನ್‌ ಯೂರಿಯಾ ಜಿಲ್ಲೆಗಳಿಗೆ ಸರಬರಾಜಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ನಮ್ಮ ಗುರಿಗಿಂತ ಹೆಚ್ಚಿನ ದಾಸ್ತಾನು ಲಭ್ಯವಿದೆ. ಜುಲೈ ತಿಂಗಳ ಬೇಡಿಕೆ ಆಧಾರದಲ್ಲಿ ವಿತರಣೆ ನಂತರವೂ ದಾಸ್ತಾನು ಉಳಿದಿದೆ. ಒಂದು ವೇಳೆ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಯೂರಿಯಾ ಸೇರಿ ರಸಗೊಬ್ಬರ ಕೊರತೆ ಕಂಡುಬಂದಲ್ಲಿ, ಹೆಚ್ಚುವರಿಯಾಗಿ ಉಳಿಕೆಯಾಗಿರುವ ಜಿಲ್ಲೆಗಳಿಂದ ಮರುವಿಂಗಡಣೆ ಮಾಡಿ ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಹಸಿರು ಗೊಬ್ಬರ, ಜೈವಿಕ ಗೊಬ್ಬರ ಹೆಚ್ಚು ಬಳಕೆ:
ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ನ್ಯಾನೋ ಯೂರಿಯಾ ಕೂಡ ಲಭ್ಯವಿದೆ. ಅದು ಸಹ ಹೆಚ್ಚು ಪರಿಣಾಮಕಾರಿ ಮತ್ತು ಲಾಭದಾಯಕ ಎಂಬುದನ್ನು ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳು ತಿಳಿಸಿವೆ. ಅದರ ಬಗ್ಗೆಯೂ ರೈತರು ಗಮನಹರಿಸಬೇಕು. ಹಾಗೆಯೇ, ಅತಿಯಾದ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಹಾಗೂ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ರಸಗೊಬ್ಬರ ಬಳಕೆಗಿಂತ ಹಸಿರು ಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆ ಹೆಚ್ಚಿಸುವ ಅಗತ್ಯವಿದೆ. ಈ ಬಗ್ಗೆಯೂ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.