“ಏನೇ ಪರಿಸ್ಥಿತಿ ಬಂದರೂ ಜು. 20ರವರೆಗೆ ಬದುಕಿರುತ್ತೇನೆ” ಎಂದ ಸೊನಮ್ ವಾಂಗ್ಚುಕ್, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮುಂದುವರಿದ ಸೊನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚುಕ್ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದೆ. ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದ್ದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಅವರು, “ಏನೇ ಪರಿಸ್ಥಿತಿ ಬಂದರೂ ಜುಲೈ 20ರವರೆಗೆ ಬದುಕಿರುತ್ತೇನೆ. ಹೊರಗಿನಿಂದ ದುರ್ಬಲನಾಗಿ ಕಾಣಬಹುದು, ಆದರೆ ಒಳಗಿನಿಂದ ದೃಢವಾಗಿದ್ದೇನೆ” ಎಂದು ಹೇಳಿದರು.

ಜುಲೈ 20ರಂದು ಸಂಸತ್ತಿನವರೆಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ತಿಳಿಸಿದ ಅವರು, “ನಾವೆಲ್ಲರೂ ಒಟ್ಟಾಗಿ ಹೋಗಿ ಪ್ರಜಾಪ್ರಭುತ್ವದ ದೇಗುಲದಲ್ಲಿ ನಮ್ಮ ಬೇಡಿಕೆಗಳನ್ನು ಮಂಡಿಸುತ್ತೇವೆ. ಒಂದು ವೇಳೆ ನೀವು ಬರದೇ ಮೆರವಣಿಗೆ ಯಶಸ್ವಿಯಾಗದಿದ್ದರೆ, ನಾನು ದೆವ್ವವಾಗಿ ಮರಳಿ ಬರುತ್ತೇನೆ” ಎಂದು ಹಾಸ್ಯಮಿಶ್ರಿತವಾಗಿ ಹೇಳಿದರು.

ಆರೋಗ್ಯ ಸ್ಥಿತಿ ಗಂಭೀರ

ಸೊನಮ್ ವಾಂಗ್ಚುಕ್ ಅವರ ತೂಕ ಸುಮಾರು 9 ಕೆ.ಜಿ. ಇಳಿಕೆಯಾಗಿದ್ದು, ಉಪವಾಸ ಮುಂದುವರಿದರೆ ಅಂಗಾಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿರುವ ದೆಹಲಿ ಹೈಕೋರ್ಟ್, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೊನಮ್ ವಾಂಗ್ಚುಕ್ ಅವರ ಆರೋಗ್ಯದ ಮೇಲೆ ನಿತ್ಯ ವೈದ್ಯಕೀಯ ನಿಗಾ ವಹಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಇತರ ವಿದ್ಯಾರ್ಥಿಗಳ ಆರೋಗ್ಯವೂ ಹದಗೆಟ್ಟು

ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 28ನೇ ದಿನಕ್ಕೆ ಕಾಲಿಟ್ಟಿದೆ. ಪ್ರತ್ಯೇಕವಾಗಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ಎಐಎಸ್ಎ ಸಂಘಟನೆಯ ವಿದ್ಯಾರ್ಥಿಗಳಾದ ನೇಹಾ, ಮನೀಶ್ ಹಾಗೂ ಅಮಿನ್ ಅವರ ಆರೋಗ್ಯವೂ ಹದಗೆಟ್ಟಿದೆ.

ನಿರ್ಜಲೀಕರಣದಿಂದ ಅಮಿನ್ ಅವರ ಆರೋಗ್ಯ ಹದಗೆಟ್ಟಿದ್ದು, ನೇಹಾ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ 49 mg/dLಗೆ ಇಳಿದಿದೆ. ಮನೀಶ್ ಅವರ ದೇಹದ ತೂಕ ಶೇ.10ಕ್ಕಿಂತ ಹೆಚ್ಚು ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳು

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
  • ಪರೀಕ್ಷಾ ಅಕ್ರಮಗಳಿಂದ ಮನನೊಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು.