ನವದೆಹಲಿ: ಸಂಸತ್ತಿನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಜನಪ್ರತಿನಿಧಿಗಳಿಗೆ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಇಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಏಳು ಮಂದಿ ಇದ್ದ ಸಾಂವಿಧಾನಿಕ ಪೀಠವು, 1998ರಲ್ಲಿ ಜೆಎಂಎಂ ಲಂಚ ಪ್ರಕರಣದಲ್ಲಿ ಪಂಚ ಸದಸ್ಯ ಪೀಠ ನೀಡಿದ್ದ ತೀರ್ಪನ್ನು ಸರ್ವಾನುಮತದಿಂದ ರದ್ದು ಮಾಡಿದೆ.
ಸಂಸತ್ತಿನಲ್ಲಿ ಭಾಷಣ ಮಾಡಲು ಅಥವಾ ಮತದಾನ ಮಾಡಲು ಲಂಚ ಪಡೆದ ಶಾಸಕರಿಗೆ ಆ ತೀರ್ಪಿನಲ್ಲಿ ಕಾನೂನು ಕ್ರಮದಿಂದ ವಿನಾಯಿತಿ ನೀಡಲಾಗಿತ್ತು.
ಲಂಚಕ್ಕೆ ಸಂಸದೀಯ ಸವಲತ್ತುಗಳಿಂದ ರಕ್ಷಣೆ ನೀಡಲಾಗುವುದಿಲ್ಲ. 1998ರ ತೀರ್ಪಿನ ವ್ಯಾಖ್ಯಾನವು ಸಂವಿಧಾನದ 105 ಮತ್ತು 194 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ತೀರ್ಪು ಪ್ರಕಟಿಸುವ ವೇಳೆ ಸಿಜೆಐ ಹೇಳಿದರು.
ಲಂಚವು ಸಾರ್ವಜನಿಕ ಜೀವನದಲ್ಲಿ ನಿಷ್ಠೆಯನ್ನು ನಾಶಪಡಿಸುವುದರಿಂದ, ಈ ವಿಧಿಗಳಡಿ ವಿನಾಯಿತಿ ಹೊಂದಿಲ್ಲ ಎಂದು ಸಿಜೆಐ ಹೇಳಿದ್ದಾರೆ.
ಸುಪ್ರೀಂ ಕೋರ್ಟಿನ ಈ ತೀರ್ಪನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ.
1998ರಲ್ಲಿ ನರಸಿಂಹ ರಾವ್ ಸಾರಥ್ಯದ ಪಂಚ ಸದಸ್ಯ ಸಾಂವಿಧಾನಿಕ ಪೀಠವು ಜೆಎಂಎಂ ಲಂಚ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಈ ವೇಳೆ ಮತ ಹಾಕಲು ಲಂಚ ಪಡೆದಿದ್ದ ಜನಪ್ರತಿನಿಧಿಗಳಿಗೆ ಕಾನೂನಿನ ರಕ್ಷಣೆ ಸಿಗಬೇಕು ಎಂದಿತ್ತು. ಭಾಷಣ ಮಾಡಲು ಲಂಚ ಪ್ರಕರಣ ಹಾಗೂ ವೋಟಿಗಾಗಿ ನೋಟು ಪಡೆಯುವ ಜನಪ್ರತಿನಿಧಿಗಳಿಗೆ ಕಾನೂನು ರಕ್ಷಣೆ ಕೊಡಬೇಕೆಂದು 1998ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಂದಿನ ತೀರ್ಪನ್ನು ಇದೀಗ ಬದಲಿಸಲಾಗಿದ್ದು, ಸುಪ್ರೀಂ ಕೋರ್ಟ್ ನಿಲುವಿಗೆ ಪ್ರಧಾನಿ ಮೋದಿ ಅವರು ‘ಸ್ವಾಗತಂ’ ಎಂದಿದ್ದಾರೆ.