ಕೇರಳದಲ್ಲಿ ಸಿಎಎ ಜಾರಿ ಇಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತಮ್ಮ ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರತಿಪಾದಿಸಿದ್ದಾರೆ.

ತಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಸರ್ಕಾರವು ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಹಾಗೆಯೆ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಕಾನೂನನ್ನು ಜಾರಿಗೊಳಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಅದರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆಯು ದೇಶದ ಜಾತ್ಯತೀತತೆಗೆ ವಿರುದ್ಧವಾಗಿದೆ. ಧರ್ಮದ ಆಧಾರದ ಮೇಲೆ ಪೌರತ್ವವನ್ನು ನಿರ್ಧರಿಸುವ ಅಧಿಕಾರ ಇಲ್ಲಿ ಯಾರಿಗೂ ಇಲ್ಲ. ಇಂತಹ ವಿಷಯಗಳನ್ನು ನಿರ್ಧರಿಸುವಲ್ಲಿ ಸಂವಿಧಾನವು ಸರ್ವೋಚ್ಛವಾಗಿದೆ, ರಾಜ್ಯ ಸರ್ಕಾರವು ಸಾಂವಿಧಾನಿಕ ತತ್ವಗಳ ಆಧಾರದ ಮೇಲೆ ಈ ವಿಷಯದಲ್ಲಿ ತನ್ನ ನಿಲುವನ್ನು ತೆಗೆದುಕೊಂಡಿದೆ ಎಂದಿದ್ದಾರೆ.