ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಮಾನವ ಹಕ್ಕು ಹೋರಾಟಗಾರ ಟಿ.ಎಸ್. ಶ್ರೀನಾಥ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಶ್ರೀನಾಥ್ ದೇಗುಲದಲ್ಲಿ ಸರ್ಪ ಸಂಸ್ಕಾರ ಮಾಡುವ ಕ್ರಿಯಾಕರ್ತರಾಗಿದ್ದರು. ಆದರೆ ಅವರು ಈ ಸೇವೆಗಾಗಿ ಭಕ್ತರಿಂದ 800 ದಕ್ಷಿಣೆ ಕೇಳುತ್ತಿದ್ದರು. ಹೀಗಾಗಿ ಅವರನ್ನು ಕ್ರಿಯಾಕರ್ತಕಾರ್ಯದಿಂದ ಕೈಬಿಡಲಾಗಿತ್ತು. ಇದೇ ದ್ವೇಷದಿಂದ ಅವರು ಎಸಿಬಿಗೆ ದೂರು ನೀಡಿದ್ದಾರೆ ಎಂದು ತಿಳಿಸಿದೆ.
ದೇಗುಲದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಶ್ರೀನಾಥ್ ವೈಯಕ್ತಿಕ ದ್ವೇಷದಿಂದ ದೂರು ದಾಖಲಿಸಿದ್ದು, ಆ ಮೂಲಕ ದೇಗುಲದ ಘನತೆ, ಪಾವಿತ್ರ್ಯತೆಗೆ ದಕ್ಕೆ ತರಲು ಯತ್ನಿಸಿದ್ದಾರೆ ಎಂದು ದೂರಿದೆ.
ದೇಗುಲದ ಎಲ್ಲ ವಸ್ತುಗಳು ಸುರಕ್ಷಿತವಾಗಿದೆ.
ಯಾವುದೇ ಅಧಿಕಾರಿಗಳು ದಾಖಲೆ ಪರಿಶೀಲಿಸಬಹುದು ಎಂದು ದೇಗುಲದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಎಸಗಿದೆಯೆಂದು ಆರೋಪಿಸಿ ಮಾನವ ಹಕ್ಕು ಹೋರಾಟಗಾರ ಸಿ.ಎಸ್. ಶ್ರೀನಾಥ್ ಎಂಬುವವರು ಎಸಿಬಿಗೆ ದೂರು ನೀಡಿದ್ದರು.
ದೇಗುಲದ ಆಡಳಿತಾಧಿಕಾರಿ ಎಂ.ಜೆ. ರೂಪಾ ಹಾಗೂ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಅವರ ವಿರುದ್ಧ ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ದೂರು ದಾಖಲಿಸಿದ್ದರು.